ಎಸ್.ಐ.ಓ ಧಾರವಾಡ ಜಿಲ್ಲೆಯ ನಿಯೋಗವು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (KSLU) ಕುಲಪತಿಗಳಿಗೆ ಭೇಟಿ ಮಾಡಿ ಪರೀಕ್ಷಾ ಗೊಂದಲವನ್ನು ಶೀಘ್ರವೇ ಬಗೆಹರಿಸಿ, ಅನುಕೂಲಕರ ಮಾದರಿಯ ಪ್ರಕಾರ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗಬೇಕೆಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಬ್ದುಸ್ ಸಲಾಮ್ ವಾಜಿದ್, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಫಿರಾಸತ್ ಮುಲ್ಲಾ, ಜೈದ್ ಗೌಂಡಿ, ಇಸ್ಮಾಯಿಲ್ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಹುಬ್ಬಳ್ಳಿ ಇದರ ಸಂಯೋಜಿತ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಪರೀಕ್ಷಾ ವಿಷಯವಾಗಿ ವಿಶ್ವವಿದ್ಯಾಲಯದ ವಿರೋಧದಲ್ಲಿ ಚಟುವಟಿಕೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವ್ಯಾವಹಾರಿಕ ನಡವಳಿಕೆ ಬಗ್ಗೆ ತೀರಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೋವಿಡ್ 19 ನಿಯಂತ್ರಣದ ಹಿನ್ನೆಲೆಯಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯು ಕಳೆದ ಎರಡು ವರ್ಷಗಳ ಶೈಕ್ಷಣಿಕ ವರ್ಷದ ಪರೀಕ್ಷೆಯನ್ನು ಸಾಧ್ಯವಾದಷ್ಟು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸುವ ತೀರ್ಮಾನ ಕೈಗೊಂಡಿತ್ತು ಅದರ ಭಾಗವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (B.C.I)ವು ಕಾನೂನು ವಿದ್ಯಾರ್ಥಿಗಳ ಪರೀಕ್ಷೆಯನ್ನು ತೆಗೆದುಕೊಳ್ಳಲು ನಾಲ್ಕು ವಿಧದ ಮಾದರಿಯನ್ನು ವಿಶ್ವವಿದ್ಯಾಲಯಗಳಿಗೆ ಸೂಚಿಸಿತ್ತು, ಆದರೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಈ ಶಿಫಾರಸನ್ನು ಪರಿಗಣನೆಗೆ ತೆಗೆದುಕೊಳ್ಳದೇ ದೈಹಿಕ ಪರೀಕ್ಷೆಯನ್ನು ನಡೆಸುವುದಾಗಿ ಸುತ್ತೋಲೆ ಹೊರಡಿಸಿತ್ತು, ವಿಶ್ವವಿದ್ಯಾಲಯದ ಈ ನಡೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ ಇದರೊಂದಿಗೆ ಕಾನೂನು ಹೋರಾಟವನ್ನು ಸಹ ಮಾಡುತ್ತಿದ್ದು ವಿಶ್ವವಿದ್ಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟೂ ಬೇಗ ಸಮಸ್ಯೆಯನ್ನು ಇತ್ಯರ್ಥ ಮಾಡುವತ್ತ ಗಮನ ಹರಿಸಬೇಕಾಗಿದೆ.

ಕಾನೂನು ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಪಡೆದಿದ್ದು ಬೋಧನಾ ತರಗತಿಗಳು ಇನ್ನೂ ಪ್ರಾರಂಭವಾಗಿಲ್ಲ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷ ತುಂಬಾ ವಿಳಂಬವಾಗಿದೆ ಎಂದು ಆರೋಪಿಸುತ್ತಿದ್ದು ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದರು ಸಹ ವಿಶ್ವವಿದ್ಯಾಲಯವು ಇದುವರೆಗೂ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡದೆ ತಮ್ಮದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.

ವಿಶ್ವವಿದ್ಯಾಲಯವು ತಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮತ್ತು ಅವರ ಭವಿಷ್ಯದ ಹಿತದೃಷ್ಟಿಯಿಂದ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಡೆಸಿ ಪಾರದರ್ಶಕ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿ ಸ್ನೇಹಿ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಬೇಡಿಕೆಗಳ ಕುರಿತಾಗಿ ಅವರೊಂದಿಗೆ ಚರ್ಚೆ-ಸಂವಾದವನ್ನು ನಡೆಸಿ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರೀಕ್ಷಾ ಗೊಂದಲವನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.