ಮೇಲ್ತೆನೆ-ಎಸ್‌ಐಒ ವತಿಯಿಂದ ವಿಚಾರಗೋಷ್ಠಿ
ಮಂಗಳೂರು, ಆ.14: ಕರಾವಳಿಯ ಬ್ಯಾರಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಸ್ವಾತಂತ್ರ ಹೋರಾಟಗಳಲ್ಲಿ ಪಾತ್ರ ವಹಿಸಿದ್ದರೂ ಕೂಡ ಕೆಲವು ಕಾರಣದಿಂದ ಅವರು ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಲಿಲ್ಲ ಎಂದು ಯುವ ಲೇಖಕ ಇಸ್ಮತ್ ಪಜೀರ್ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ-ಮೇಲ್ತೆನೆ ಹಾಗೂ ಎಸ್‌ಐಒ ಉಳ್ಳಾಲ ಘಟಕದ ವತಿಯಿಂದ ತೊಕ್ಕೊಟ್ಟಿನ ಕಾರುಣ್ಯ ಸದನದಲ್ಲಿ ಬುಧವಾರ ನಡೆದ ‘ಸ್ವಾತಂತ್ರ ಹೊರಾಟದಲ್ಲಿ ಬ್ಯಾರಿಗಳ ಪಾತ್ರ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.
ಇಂದು ಹೆಜ್ಜೆ ಹೆಜ್ಜೆಗೂ ಮುಸ್ಲಿಮರು ತನ್ನ ದೇಶ ನಿಷ್ಠೆ ಸಾಬೀತುಪಡಿಸಬೇಕಾದ ಕೇಡುಗಾಲದಲ್ಲಿ ಬದುಕುತ್ತಿದ್ದಾರೆ. ಯಾರು ದೇಶದ ವಿಮೋಚನೆಗಾಗಿ ಸೊತ್ತು, ವಿತ್ತ ಮತ್ತು ಪ್ರಾಣವನ್ನು ಅರ್ಪಿಸಿದರೋ ಅವರ ಕೊಡುಗೆಗಳನ್ನು ಶೂನ್ಯವೆಂದೂ, ಯಾರು ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಬಗೆದರೋ ಅವರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿ ಚಿತ್ರಿಸಲ್ಪಡುತ್ತಿದ್ದಾರೆ. ಕರಾವಳಿಯ ಮುಸ್ಲಿಮರ ಪೈಕಿ ಅನೇಕ ಮಂದಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ಜೈಲಿಗೆ ಕಳುಹಿಸಿದವರನ್ನು ಮಾತ್ರ ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ. ಹಾಗಾಗಿ ಅನೇಕ ಬ್ಯಾರಿ ಮುಸ್ಲಿಂ ಸ್ವಾತಂತ್ರ ಹೋರಾಟಗಾರರು ಆ ಪುಟಗಳಲ್ಲಿ ದಾಖಲೆಯಾಗದೆ ವಂಚಿತರಾದರು ಎಂದು ಇಸ್ಮತ್ ನುಡಿದರು.
ಮುಸ್ಲಿಮರಿಗೆ ಸ್ವಾತಂತ್ರ್ಯ ಸಂಗ್ರಾಮವೆಂಬುದು ಧಾರ್ಮಿಕ ಬಾಧ್ಯತೆಯೂ ಆಗಿತ್ತು. ಆ ನಿಟ್ಟಿನಲ್ಲಿ ದೇಶದ ಇತರ ಭಾಗಗಳ ಮುಸ್ಲಿಮರು ಹೇಗೆ ಹೋರಾಡಿದರೋ ಹಾಗೆಯೇ ಕರಾವಳಿ ಕರ್ನಾಟಕದ ಬ್ಯಾರಿ ಮುಸ್ಲಿಮರೂ ಬ್ರಿಟಿಷ್ ವಸಾಹತು ಶಾಹಿಯ ವಿರುದ್ಧ ಹೋರಾಡಿದ್ದರು. ಜಿಲ್ಲೆಯ ಬ್ಯಾರಿ ಮುಸ್ಲಿಮರ ಧಾರ್ಮಿಕ ವಿಚಾರದಲ್ಲಿ ಮಲಬಾರ್ ಪ್ರದೇಶದ ಧಾರ್ಮಿಕ ವಿದ್ವಾಂಸರ ಪ್ರಭಾವ ಅಂದೂ ಇಂದಿನಂತೆಯೇ ದಟ್ಟವಾಗಿತ್ತು. ಕೇರಳದ ಪ್ರಮುಖ ಉಲಮಾ ನಾಯಕ ವೆಲಿಯಂಗೋಡು ಉಮರ್ ಖಾಝಿ ಅಂದು ಬ್ರಿಟಿಷರ ವಿರುದ್ಧ ಜಿಹಾದ್‌ಗೆ ನೀಡಿದ ಫತ್ವಾವನ್ನು ಅನುಸರಿಸಿ ಮಂಗಳೂರು ಸುತ್ತಮುತ್ತಲಿನ ಬ್ಯಾರಿ ಮುಸ್ಲಿಮರು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ಧ ಹೋರಾಡಿದ್ದರು ಎಂದು ಇಸ್ಮತ್ ಹೇಳಿದರು.
ಉಳ್ಳಾಲ ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ವಿಷಯ ಮಂಡಿಸಿ ಸ್ವಾತಂತ್ರ ಹೋರಾಟದಲ್ಲಿ ದೇಶಾದ್ಯಂತ ಸಾಕಷ್ಟು ಸಂಖ್ಯೆಯ ಮುಸ್ಲಿಮರು ಪಾಲ್ಗೊಂಡಿದ್ದಾರೆ. ಆ ಪೈಕಿ ಕರಾವಳಿಯ ಅದರಲ್ಲೂ ಗ್ರಾಮಾಂತರ ಪ್ರದೇಶದ ಬ್ಯಾರಿ ಮುಸ್ಲಿಮರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ. ಇತಿಹಾಸ ಪುಟಗಳಲ್ಲಿ ದಾಖಲೆಯಾಗದಿರುವ ಮೂಲಕ ಆದ ಅನ್ಯಾಯವನ್ನು ಇನ್ನಾದರು ಅಧ್ಯಯನ ನಡೆಸಿ ಯುವ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ ಬ್ಯಾರಿ ಹಿರಿಯರ ಹೋರಾಟಕ್ಕೆ ನಾವು ಅಪಚಾರ ಎಸಗಿದಂತಾಗುತ್ತದೆ ಎಂದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಕ್ಷ ಹಂಝ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಮಾಅತೆ ಇಸ್ಲಾಮೀ ಹಿಂದ್‌ನ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಐಒ ಕಾರ್ಯಕರ್ತ ಶಾಹಿಲ್ ಕಿರಾಅತ್ ಪಠಿಸಿದರು. ಎಸ್‌ಐಒ ಉಳ್ಳಾಲ ಘಟಕದ ಅಧ್ಯಕ್ಷ ನಿಝಾಮ್ ಉಳ್ಳಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮನಿಗೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಆಶಿರುದ್ದೀನ್ ಆಲಿಯಾ ಮಂಜನಾಡಿ ವಂದಿಸಿದರು.