ಎಸ್.ಐ.ಓ ಭಟ್ಕಳದ ವತಿಯಿಂದ ಆರ್.ಟಿ.ಇ ಸಂಬಂಧಿತ ಮಾಹಿತಿಗಾಗಿ ಬಿ.ಇ.ಓ ಭೇಟಿ

ಭಟ್ಕಳ: ಎಸ್‌.ಐ.ಓ ಕಾರ್ಯಕರ್ತರು ಮತ್ತು ಎಚ್.ಆರ್.ಎಸ್ ಕಾರ್ಯಕರ್ತರು ಭಟ್ಕಳದ ಬಿ.ಇ.ಓ ಗೆ ಭೇಟಿಯಾದರು.

ಭೇಟಿಯ ಸಂದರ್ಭದಲ್ಲಿ ಶಿಕ್ಷಣ ಹಕ್ಕು ಕಾಯಿದೆಗೆ ಸಂಬಂಧಿಸಿದಂತೆ ಅವರಲ್ಲಿ ಮಾಹಿತಿ ಪಡೆದು, ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು.

ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ನೂತನ ಶಿಕ್ಷಣ ನೀತಿ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ

ರಾಯಚೂರು: ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ಜನಪ್ರತಿನಿಧಿಗಳು ಕೇಂದ್ರ ಸರಕಾರ ಅನುಷ್ಠಾನಕ್ಕೆ ತರಲಿರುವ ನೂತನ ಶಿಕ್ಷಣ ನೀತಿಯನ್ನು ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ನೂತನ ಶಿಕ್ಷಣ ನೀತಿಯಲ್ಲಿ ಇರುವ ಅಂಶಗಳು ವಿಧಾನ ಸಭೆಯಲ್ಲಿ ಚರ್ಚೆಯಾಗಬೇಕು. ಅದರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ನಾಗರಿಕರ ಮುಂದೆ ಸ್ಪಷ್ಟವಾಗಬೇಕೆಂದು ಆಗ್ರಹಿಸಿದ್ದಾರೆ.

ಲಿಂಗಸೂರು, ಸಿಂಧನೂರು ಮತ್ತು ರಾಯಚೂರು ಘಟಕದ ಕಾರ್ಯಕರ್ತರು ಮನವಿ ಸಲ್ಲಿಸಿ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದೆ.

ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಮುಕ್ತ ಚರ್ಚೆಗೆ ಒಳಪಡಿಸಿ – ಎಸ್.ಐ.ಓ ಆಗ್ರಹ.

ಪತ್ರಿಕಾ ಪ್ರಕಟಣೆ

ಬೆಂಗಳೂರು :- ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ರೀತಿ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಜಾರಿ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳು ಗೊಂದಲಕಾರಿಯಾಗಿದ್ದು ಅವುಗಳನ್ನು ಮರೆಮಾಚುವ ಉದ್ದೇಶದಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅದನ್ನು ಜಾರಿಗೊಳಿಸಲು ಹೊರಟಿದೆ ಎಂಬುದು ಒಂದು ವಾದವಾದರೆ ಮತ್ತೊಂದೆಡೆ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಷಡ್ಯಂತ್ರ ಅಡಗಿದೆ ಎಂಬುದು ಅಧ್ಯಯನಶೀಲರ ವಾದವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದ್ದ ಬದಲಾವಣೆಗಳ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಚರ್ಚೆ ನಡೆಸಿದ ನಂತರ ಗೋಚರವಾಗುವ ತಪ್ಪು ಅಥವಾ ಗೊಂದಲಕಾರಿ ವಿಷಯಗಳನ್ನು ತಿದ್ದುಪಡಿಗೆ ತಂದು, ಒಳ್ಳೆಯ ಅಂಶಗಳನ್ನು ಪುಷ್ಟೀಕರಿಸಿ ಅದನ್ನು ಸದನದಲ್ಲಿ ಮಂಡಿಸಿ ರಾಜ್ಯಕ್ಕೆ ಅನುಗುಣವಾಗುವ ಸಮಗ್ರ ನೂತನ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಜಾರಿಗೊಳಿಸುವುದು ಉತ್ತಮ ಕ್ರಮವಾಗಿದೆ ಎಂಬುದನ್ನು ಎಸ್.ಐ.ಓ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಬಯಸುತ್ತದೆ.

ಈ ರಾಷ್ಟ್ರೀಯ ಶಿಕ್ಷಣ ನೀತಿಯು 3 ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುತ್ತದೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯದಿಂದ ತಿಳಿದಿಕೊಂಡಿದ್ದೇವೆ ಆದರೆ, ಈ ನೀತಿಯ ಕೈಪಿಡಿಯನ್ನು ರಾಜ್ಯದ ಜನತೆಗೆ ಲಭ್ಯವಾಗಿಸಿ ಚರ್ಚೆ-ಸಂವಾದಕ್ಕೆ ಮುಕ್ತ ಅವಕಾಶ ನೀಡಿ ಅದರ ವಿಮರ್ಶೆ ಮತ್ತು ವಿಶ್ಲೇಷಣೆಗೆ ಅವಕಾಶ ಕಲ್ಪಿಸದೇ ನಮ್ಮ ರಾಜ್ಯ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದು ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಮೊದಲಿಗೆ ಜಾರಿ ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.

ಶಿಕ್ಷಣ ಹಕ್ಕು ಕಾಯಿದೆ ಕಲಂ 6, 9, 21 ಹಾಗು 22 ರ ಅನ್ವಯ ಶಾಲಾ ಮತ್ತು ಪಂಚಾಯತಿ ಹಂತದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮತ್ತು ಗ್ರಾಮ ಪಂಚಾಯತಿಗಳ ಮೇಲಿರುವುದರಿಂದ ನೀತಿಯನ್ನು ಸಾರ್ವಜನಿಕರ ಓದಿಗೆ ಮತ್ತು ಚರ್ಚೆಗೆ ಅವಕಾಶ ನೀಡಿ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಮೂಲ ವಾರಸುದಾರರಾದ ನಾವು ನಮ್ಮ ಮಕ್ಕಳ ಶಿಕ್ಷಣವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ತಿಳಿಯದೆ ಅದನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಸರಿಯಾದ ಪ್ರಕ್ರಿಯೆಯಲ್ಲ.
ಆದ್ದರಿಂದ, ಅದನ್ನು ತರಾತುರಿಯಾಗಿ ಜಾರಿಗೊಳಿಸಬಾರದೆಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ.

ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ಜನ ಸ್ನೇಹಿ ಕೈಪಿಡಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿ ಶಾಲೆ, ಪಂಚಾಯತಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಈ ಚರ್ಚೆಗಳ ಆಧಾರದ ಮೇಲೆ ನಮ್ಮ ರಾಜ್ಯಕ್ಕೆ ಅನುವಾಗುವ “ಕರ್ನಾಟಕ ಶಿಕ್ಷಣ ನೀತಿ”(ಕಶಿನೀ) ರೂಪಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ.

ಕರ್ನಾಟಕ ಶಿಕ್ಷಣ ನೀತಿಯನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡರಲ್ಲೂ ಮಂಡಿಸಿ, ಚರ್ಚಿಸಿ ಅಂಗೀಕರಿಸಿದ ನಂತರವೇ ಜಾರಿಗೊಳಿಸಬೇಕೇಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಅರಿವು ಸಾಲ ಮಂಜೂರಾತಿಗೆ ವಿಳಂಬ – ಶೀಘ್ರ ಬಿಡುಗಡೆ ಎಸ್.ಐ.ಓ ಉಡುಪಿ ಆಗ್ರಹ

ಉಡುಪಿ: ಕರ್ನಾಟಕ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಅರಿವು ಸಾಲದ ಮೊತ್ತ ಜೂನ್ ತಿಂಗಳಲ್ಲಿ ಮಂಜೂರು ಆಗುತ್ತಿದ್ದು ಆದರೆ ಈ ಬಾರಿ ಬಹಳ ವಿಳಂಬವಾಗಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಬಹಳ ಕಷ್ಟಕರವಾಗುತ್ತಿದೆ ಎಂದು ಎಸ್ ಐ ಓ ಜಿಲ್ಲಾದ್ಯಕ್ಷ ನಾಸೀರ್ ಹೂಡೆ ತಿಳಿಸಿದ್ದಾರೆ.

ಇವರು ಇಂದು ಮುಖ್ಯಮಂತ್ರಿ ಮತ್ತು ರಾಜ್ಯ ಅಲ್ಪಸಂಖ್ಯಾತ ಇಲಾಖೆಯಗೆ ಮನವಿಯನ್ನು ಸಲ್ಲಿಸುತ್ತಾ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಧರ್ಮಧ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ರೀತಿಯ ಸಾಲದ ಮೊತ್ತವನ್ನು ಆಯಾ ಕಾಲೇಜುಗಳಿಗೆ ಲಭಿಸಲಿಲ್ಲ. ಮತ್ತು ಕೆ. ಎಂ. ಡಿ. ಸಿ ಯವರು ಜೂನ್ ತಿಂಗಳಿಂದ ಹಣ ಬಿಡುಗಡೆ ಆಗುತ್ತದೆ ಎಂಬ ಸುಳ್ಳು ಭರವಸೆಯನ್ನು ನೀಡುತ್ತಿದೆ. ಸಾಲದ ಮೊತ್ತವನ್ನೇ ನಂಬಿದ ವಿದ್ಯಾರ್ಥಿಗಳಿಗೆ ಇದೀಗ ದಿಕ್ಕಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಂಬಂಧ ಪಟ್ಟವರು ಇದರ ಬಗ್ಗೆ ಪ್ರಶ್ನಿಸಿ ವಿದ್ಯಾಥಿಗಳ ಜೀವನಕ್ಕೆ ಆಸರೆಯಾಗಬೇಕಿದೆ. ಅದರ ಜೊತೆಯಲ್ಲೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಲಭಿಸುತ್ತಿದ್ದು ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭಿಸದೆ ವಿಳಂಬವಾಗುತ್ತಿದೆ ಈ ಬಗ್ಗೆ ತಾವುಗಳು ಸಂಬಂಧಪಟ್ಟ ಇಲಾಖೆಯ ಜೊತೆ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಶಾರೂಕ್, ಸದಸ್ಯರಾದ ಅಫ್ವಾನ್, ವಸೀಮ್, ಸಲಾವುದ್ದೀನ್, ಅಯಾನ್ ಮತ್ತು ರಿಝಾನ್ ಉಪಸ್ಥಿತರಿದ್ದರು.

ಎಸ್.ಐ.ಓ ಇಳಕಲ್ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

ಇಳಕಲ್ : ಎಸ್.ಐ.ಓ ವಿದ್ಯಾರ್ಥಿ ಸಂಘಟನೆ ಇಳಕಲ್ ಘಟಕದ ವತಿಯಿಂದ ನಗರ ಮಟ್ಟದ ಪ್ರೌಢಶಾಲೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಳಕಲ್ ನಗರದ ಬಸ್ ಸ್ಟ್ಯಾಂಡ್ ರಸ್ತೆಯ ಇಬ್ರಾಹಿಂ ಮಸ್ಜಿದ್ ಹೊರಾಂಗಣದಲ್ಲಿ ದಿನಾಂಕ 30/08/2020 ರಂದು ಬೆಳಿಗ್ಗೆ 11.00 ಗಂಟೆಗೆ ನೆರವೇರಿಸಲಾಯಿತು.

ಸನ್ 2019-2020 ರ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಇಳಕಲ್ ನಗರದ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣವನ್ನು ಮಾಡಿದ ಮೊಹಮ್ಮದ್ ಫೀರ್ ಲಟಗೇರಿ ರವರು ಎಸ್.ಐ.ಓ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಮತ್ತು ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಹಾಗೂ ಉನ್ನತ ಶೈಕ್ಷಣಿಕ ವ್ಯಾಸಂಗಕ್ಕೆ ಪ್ರೋತ್ಸಾಹಿಸಲು ತನ್ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಗಣ್ಣ ಗದ್ದಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಇಳಕಲ್ ರವರು ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಎಸ್.ಐ.ಓ ಇಳಕಲ್ ಘಟಕದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿ ಯುವಕರು ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಮತ್ತು ಯಾವುದೇ ವಿಷಯವನ್ನು ಪರೀಕ್ಷಿಸದೆ ಒಪ್ಪಿಕೊಳ್ಳಬಾರದು ಹಾಗೂ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ತಮ್ಮ ಗುರಿಯನ್ನು ಸಾಧಿಸಿ ಸಾಮಾಜಕ್ಕೆ ಉತ್ತಮ ನಾಗರಿಕರಾಗಿ ವರ್ಗಾವಣೆಯಾಗಬೇಕು ಎಂದು ಕರೆಕೊಟ್ಟರು.

ಇನ್ನೋರ್ವ ಅತಿಥಿಯಾದ ಐಹೊಳ್ಳಿ ಸರ್ ರವರು ದೈಹಿಕ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ಅಲಂಪೂರಪೇಟ ಇವರು ಮಾತನಾಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಸಂಘಟನೆಯ ಪದಾಧಿಕಾರಿಗಳಿಗೆ ಶುಭ
ಹಾರೈಸಿದರು, ವಿದ್ಯಾರ್ಥಿಗಳು ಎಂದಿಗೂ ಅಂಕ ಗಳಿಸುವ ಯಂತ್ರವಾಗಬಾರದು ಪಠ್ಯಕ್ರಮವನ್ನು ಕೇವಲ ಹೆಚ್ಚಿನ ಅಂಕ ಗಳಿಸಲು ಮಾತ್ರ ಓದದೆ ಈ ಪಾಠಗಳಿಂದ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಜಾತಿ ಧರ್ಮದ ಸಂಕುಚಿತತೆ ಇರಬಾರದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂಬ ಸಂದೇಶ ನೀಡಿದರು.

ಉಳಿದಂತೆ ಮುಹಮ್ಮದ್ ಅಲಿ ಯತ್ನಟ್ಟಿ ನಿವೃತ್ತ ಶಿಕ್ಷಕರು ಅಂಜುಮನ್ ಸಂಸ್ಥೆ ಇವರು ಮಾತನಾಡಿ ಶಿಕ್ಷಣವು ಮನುಷ್ಯನ ಹುಟ್ಟಿದ ಉದ್ದೇಶವನ್ನು ಹಾಗೂ ಜೀವನದ ನಿಜ ವಾಸ್ತವಿಕತೆಯನ್ನು ಪರಿಚಯಿಸುವ ಮಾಧ್ಯಮವಾಗಿದೆ ಎಂದು ಭಾವಿಸಿದರು ಶಿಕ್ಷಣವು ಒಳಿತು – ಕೆಡುಕುಗಳ ವ್ಯತ್ಯಾಸವನ್ನು ಗುರುತಿಸುವ ಅತ್ಯುತ್ತಮ ವಿಧಾನವಾಗಿದೆ ಎಂದು ಹೇಳಿ ವಿದ್ಯಾರ್ಥಿಗಳ ಚಾರಿತ್ರಿಕ ನಿರ್ಮಾನವು ಉತ್ತಮ ಅಧ್ಯಯನದಿಂದ ಸಾಧ್ಯವಾಗುತ್ತದೆ ಎಂಬ ತಮ್ಮ ವಿಚಾರವನ್ನು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಮ್ಮದ್ ಫೀರ್ ಲಟಗೇರಿ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಎಸ್.ಐ.ಓ ಕರ್ನಾಟಕ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಐಹೊಳ್ಳಿ ಸರ್, ಸಂಗಣ್ಣ ಗದ್ದಿ, ಸಯೀದ್ ಅಹ್ಮದ್ ಕೊತ್ವಾಲ್, ಮುಹಮ್ಮದ್ ಅಲಿ ಯತ್ನಟ್ಟಿ, ಅಲ್ತಾಫ್ ಬಿಳೇಕುದರಿ, ಮುಬಷ್ಷಿರ್ ಶೇಕ್ ರವರು ವಹಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.