ಸಚಿವ ಅಶ್ವಥ್ ನಾರಾಯಣ್ ರನ್ನು ಭೇಟಿಯಾದ ಎಸ್ ಐ ಓ ನಿಯೋಗ: ಎನ್ ಇ ಪಿ ಬಗ್ಗೆ ಠರಾವು ಅರ್ಪಣೆ. ಎಸ್ ಐ ಓ ರಾಜ್ಯ ಘಟಕದ ನಿಯೋಗವು ಉನ್ನತ ಶಿಕ್ಷಣ ಸಚಿವರಾದ ಡಾ ಅಶ್ವಥ್ ನಾರಾಯಣ್ ಅವರನ್ನು ಭೇಟಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ವಿವಿಧ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಿತು. ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಕ್ಕೆ ರಾಜ್ಯ ಸರಕಾರ ಹೊರಟಿದ್ದು ಈ ಬಗ್ಗೆ ತನ್ನ ನಿಲುವನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಎಸ್ ಐ ಓ ತನ್ನ ಭಿನ್ನಮತಗಳನ್ನು ವ್ಯಕ್ತಪಡಿಸಿದ್ದು ಅವುಗಳನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ದುಂಡುಮೇಜಿನ ಸಭೆ ನಡೆಸಲಾಗಿದ್ದು ಅದರಲ್ಲಿ ಅಂಗೀಕರಿಸಲಾದ ಠರಾವಿನ ಪ್ರತಿಯನ್ನು ಶಿಕ್ಷಣ ಸಚಿವರಿಗೆ ನೀಡುವ ಮೂಲಕ ಈ ಬಗ್ಗೆ ಗಮನಹರಿಸುವಂತೆ ಮತ್ತು NEPಯನ್ನು ಜಾರಿಗೊಳಿಸುವ ಮೊದಲು ಸೂಕ್ತ ಬದಲಾವಣೆಗಳನ್ನು ತರುವಂತೆ ಸಚಿವರಲ್ಲಿ ವಿನಂತಿಸಿತು. ಈ ಸಂದರ್ಭದಲ್ಲಿ ಎಸ್.ಐ.ಓ ರಾಜ್ಯ ಕಾರ್ಯದರ್ಶಿಗಳಾದ ಆಸಿಮ್ ಜವಾದ್, ಮಹಮ್ಮದ್ ಪೀರ್ ಲಟಗೇರಿ ಮತ್ತು ನಾಸಿರ್ ಹೂಡೆ ಉಪಸ್ಥಿತರಿದ್ದರು.