ಪತ್ರಿಕಾ ಪ್ರಕಟಣೆ
ಬೆಂಗಳೂರು :- ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ರೀತಿ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಜಾರಿ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳು ಗೊಂದಲಕಾರಿಯಾಗಿದ್ದು ಅವುಗಳನ್ನು ಮರೆಮಾಚುವ ಉದ್ದೇಶದಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅದನ್ನು ಜಾರಿಗೊಳಿಸಲು ಹೊರಟಿದೆ ಎಂಬುದು ಒಂದು ವಾದವಾದರೆ ಮತ್ತೊಂದೆಡೆ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಷಡ್ಯಂತ್ರ ಅಡಗಿದೆ ಎಂಬುದು ಅಧ್ಯಯನಶೀಲರ ವಾದವಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದ್ದ ಬದಲಾವಣೆಗಳ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಚರ್ಚೆ ನಡೆಸಿದ ನಂತರ ಗೋಚರವಾಗುವ ತಪ್ಪು ಅಥವಾ ಗೊಂದಲಕಾರಿ ವಿಷಯಗಳನ್ನು ತಿದ್ದುಪಡಿಗೆ ತಂದು, ಒಳ್ಳೆಯ ಅಂಶಗಳನ್ನು ಪುಷ್ಟೀಕರಿಸಿ ಅದನ್ನು ಸದನದಲ್ಲಿ ಮಂಡಿಸಿ ರಾಜ್ಯಕ್ಕೆ ಅನುಗುಣವಾಗುವ ಸಮಗ್ರ ನೂತನ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಜಾರಿಗೊಳಿಸುವುದು ಉತ್ತಮ ಕ್ರಮವಾಗಿದೆ ಎಂಬುದನ್ನು ಎಸ್.ಐ.ಓ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಬಯಸುತ್ತದೆ.
ಈ ರಾಷ್ಟ್ರೀಯ ಶಿಕ್ಷಣ ನೀತಿಯು 3 ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುತ್ತದೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯದಿಂದ ತಿಳಿದಿಕೊಂಡಿದ್ದೇವೆ ಆದರೆ, ಈ ನೀತಿಯ ಕೈಪಿಡಿಯನ್ನು ರಾಜ್ಯದ ಜನತೆಗೆ ಲಭ್ಯವಾಗಿಸಿ ಚರ್ಚೆ-ಸಂವಾದಕ್ಕೆ ಮುಕ್ತ ಅವಕಾಶ ನೀಡಿ ಅದರ ವಿಮರ್ಶೆ ಮತ್ತು ವಿಶ್ಲೇಷಣೆಗೆ ಅವಕಾಶ ಕಲ್ಪಿಸದೇ ನಮ್ಮ ರಾಜ್ಯ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದು ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಮೊದಲಿಗೆ ಜಾರಿ ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆ ಕಲಂ 6, 9, 21 ಹಾಗು 22 ರ ಅನ್ವಯ ಶಾಲಾ ಮತ್ತು ಪಂಚಾಯತಿ ಹಂತದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮತ್ತು ಗ್ರಾಮ ಪಂಚಾಯತಿಗಳ ಮೇಲಿರುವುದರಿಂದ ನೀತಿಯನ್ನು ಸಾರ್ವಜನಿಕರ ಓದಿಗೆ ಮತ್ತು ಚರ್ಚೆಗೆ ಅವಕಾಶ ನೀಡಿ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಮೂಲ ವಾರಸುದಾರರಾದ ನಾವು ನಮ್ಮ ಮಕ್ಕಳ ಶಿಕ್ಷಣವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ತಿಳಿಯದೆ ಅದನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಸರಿಯಾದ ಪ್ರಕ್ರಿಯೆಯಲ್ಲ.
ಆದ್ದರಿಂದ, ಅದನ್ನು ತರಾತುರಿಯಾಗಿ ಜಾರಿಗೊಳಿಸಬಾರದೆಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ.
ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ಜನ ಸ್ನೇಹಿ ಕೈಪಿಡಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿ ಶಾಲೆ, ಪಂಚಾಯತಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಈ ಚರ್ಚೆಗಳ ಆಧಾರದ ಮೇಲೆ ನಮ್ಮ ರಾಜ್ಯಕ್ಕೆ ಅನುವಾಗುವ “ಕರ್ನಾಟಕ ಶಿಕ್ಷಣ ನೀತಿ”(ಕಶಿನೀ) ರೂಪಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ.
ಕರ್ನಾಟಕ ಶಿಕ್ಷಣ ನೀತಿಯನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡರಲ್ಲೂ ಮಂಡಿಸಿ, ಚರ್ಚಿಸಿ ಅಂಗೀಕರಿಸಿದ ನಂತರವೇ ಜಾರಿಗೊಳಿಸಬೇಕೇಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.