ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಮುಕ್ತ ಚರ್ಚೆಗೆ ಒಳಪಡಿಸಿ – ಎಸ್.ಐ.ಓ ಆಗ್ರಹ.

ಪತ್ರಿಕಾ ಪ್ರಕಟಣೆ

ಬೆಂಗಳೂರು :- ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ರೀತಿ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಜಾರಿ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳು ಗೊಂದಲಕಾರಿಯಾಗಿದ್ದು ಅವುಗಳನ್ನು ಮರೆಮಾಚುವ ಉದ್ದೇಶದಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅದನ್ನು ಜಾರಿಗೊಳಿಸಲು ಹೊರಟಿದೆ ಎಂಬುದು ಒಂದು ವಾದವಾದರೆ ಮತ್ತೊಂದೆಡೆ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಷಡ್ಯಂತ್ರ ಅಡಗಿದೆ ಎಂಬುದು ಅಧ್ಯಯನಶೀಲರ ವಾದವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದ್ದ ಬದಲಾವಣೆಗಳ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಚರ್ಚೆ ನಡೆಸಿದ ನಂತರ ಗೋಚರವಾಗುವ ತಪ್ಪು ಅಥವಾ ಗೊಂದಲಕಾರಿ ವಿಷಯಗಳನ್ನು ತಿದ್ದುಪಡಿಗೆ ತಂದು, ಒಳ್ಳೆಯ ಅಂಶಗಳನ್ನು ಪುಷ್ಟೀಕರಿಸಿ ಅದನ್ನು ಸದನದಲ್ಲಿ ಮಂಡಿಸಿ ರಾಜ್ಯಕ್ಕೆ ಅನುಗುಣವಾಗುವ ಸಮಗ್ರ ನೂತನ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಜಾರಿಗೊಳಿಸುವುದು ಉತ್ತಮ ಕ್ರಮವಾಗಿದೆ ಎಂಬುದನ್ನು ಎಸ್.ಐ.ಓ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಬಯಸುತ್ತದೆ.

ಈ ರಾಷ್ಟ್ರೀಯ ಶಿಕ್ಷಣ ನೀತಿಯು 3 ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುತ್ತದೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯದಿಂದ ತಿಳಿದಿಕೊಂಡಿದ್ದೇವೆ ಆದರೆ, ಈ ನೀತಿಯ ಕೈಪಿಡಿಯನ್ನು ರಾಜ್ಯದ ಜನತೆಗೆ ಲಭ್ಯವಾಗಿಸಿ ಚರ್ಚೆ-ಸಂವಾದಕ್ಕೆ ಮುಕ್ತ ಅವಕಾಶ ನೀಡಿ ಅದರ ವಿಮರ್ಶೆ ಮತ್ತು ವಿಶ್ಲೇಷಣೆಗೆ ಅವಕಾಶ ಕಲ್ಪಿಸದೇ ನಮ್ಮ ರಾಜ್ಯ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದು ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಮೊದಲಿಗೆ ಜಾರಿ ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.

ಶಿಕ್ಷಣ ಹಕ್ಕು ಕಾಯಿದೆ ಕಲಂ 6, 9, 21 ಹಾಗು 22 ರ ಅನ್ವಯ ಶಾಲಾ ಮತ್ತು ಪಂಚಾಯತಿ ಹಂತದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮತ್ತು ಗ್ರಾಮ ಪಂಚಾಯತಿಗಳ ಮೇಲಿರುವುದರಿಂದ ನೀತಿಯನ್ನು ಸಾರ್ವಜನಿಕರ ಓದಿಗೆ ಮತ್ತು ಚರ್ಚೆಗೆ ಅವಕಾಶ ನೀಡಿ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಮೂಲ ವಾರಸುದಾರರಾದ ನಾವು ನಮ್ಮ ಮಕ್ಕಳ ಶಿಕ್ಷಣವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ತಿಳಿಯದೆ ಅದನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಸರಿಯಾದ ಪ್ರಕ್ರಿಯೆಯಲ್ಲ.
ಆದ್ದರಿಂದ, ಅದನ್ನು ತರಾತುರಿಯಾಗಿ ಜಾರಿಗೊಳಿಸಬಾರದೆಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ.

ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ಜನ ಸ್ನೇಹಿ ಕೈಪಿಡಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿ ಶಾಲೆ, ಪಂಚಾಯತಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಈ ಚರ್ಚೆಗಳ ಆಧಾರದ ಮೇಲೆ ನಮ್ಮ ರಾಜ್ಯಕ್ಕೆ ಅನುವಾಗುವ “ಕರ್ನಾಟಕ ಶಿಕ್ಷಣ ನೀತಿ”(ಕಶಿನೀ) ರೂಪಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ.

ಕರ್ನಾಟಕ ಶಿಕ್ಷಣ ನೀತಿಯನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡರಲ್ಲೂ ಮಂಡಿಸಿ, ಚರ್ಚಿಸಿ ಅಂಗೀಕರಿಸಿದ ನಂತರವೇ ಜಾರಿಗೊಳಿಸಬೇಕೇಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಕೆ.ಎಸ್.ಎಲ್.ಯು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುವುದು ನಿಲ್ಲಿಸಲಿ, ಪರೀಕ್ಷೆ ಹಿಂಪಡೆಯಿರಿ – ಎಸ್.ಐ.ಓ ಆಗ್ರಹ

ಪತ್ರಿಕಾ ಪ್ರಕಟಣೆಗಾಗಿ

ಬೆಂಗಳೂರು: ಈಗಾಗಲೇ ರಾಜ್ಯ ಸರಕಾರ ಅಂತಿಮ ಸೆಮಿಸ್ಟರ್ ಹೊರತು ಪಡಿಸಿ ಬೇರೆಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಂತೆ ನಿರ್ದೇಶಿಸಿ ಆದೇಶ ಹೊರಡಿಸಿದ ಹೊರತಾಗಿಯೂ ಕೆ.ಎಸ್.ಎಲ್.ಯು ವಿಶ್ವವಿದ್ಯಾಲಯ ಪಠ್ಯಕ್ರಮ ಪೂರ್ಣವಾಗದೇ ಪರೀಕ್ಷೆ ನಡೆಸಲು ಹೊರಟಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.

ಕೊರೊನಾ ಸೋಂಕಿನಿಂದಾಗಿ ಬೋಧನಾ ತರಗತಿಗಳು ನಡೆಯದೆ ಅರ್ಧದಷ್ಟೂ ಪಠ್ಯಕ್ರಮವೇ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ‌‌
ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು
ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಕೈಬಿಟ್ಟು ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಈ ಮೂಲಕ ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಹೊರ ರಾಜ್ಯ ವಿದ್ಯಾರ್ಥಿಗಳು ಕೂಡ ಕೋವಿಡ್-19 ನಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಬಂದು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಕೂಡ ಇಲ್ಲ. ಮತ್ತೊಂದು ಕಡೆ ಹಾಸ್ಟೆಲ್ ಗಳನ್ನು ಕೋವಿಡ್ – 19 ವ್ಯವಸ್ಥೆಗೆ ಬಳಸುತ್ತಿರುವುದರಿಂದ ಅವರು ಬಂದು ಉಳಿದು ಕೊಳ್ಳುವುದು ಎಲ್ಲಿ ಎಂಬ ಪ್ರಶ್ನೆ ಉದ್ಬವವಾಗಿದೆ. ಆದರೆ ವಿಶ್ವವಿದ್ಯಾಲಯ ಇದ್ಯಾವುದರ ಬಗ್ಗೆ ಚಿಂತಿಸದೆ ಬೇಜಾಬ್ದಾರಿಯಿಂದ ಪರೀಕ್ಷಾ ದಿನಾಂಕ ಪ್ರಕಟಿಸಿ ಹಾಜರಾಗಿ ಎಂದಿರುವುದು ಖಂಡನಾರ್ಹ

ಇನ್ನು ಕೊರೊನಾ‌ ಸೋಂಕಿನಿಂದಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸುವುದು ಸೂಕ್ತವಲ್ಲದ ಕಾರಣ ಕಾನೂನು ಪದವಿಯ ಅಂತಿಮ‌ ವರ್ಷದ ವಿದ್ಯಾರ್ಥಿಗಳು ಅವರಿಗೆ ಅನುಕೂಲಕರವಾದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆಗೆ ಹಾಜರಾಗಲು ಕಾನೂನು ವಿಶ್ವವಿದ್ಯಾಲಯ ಅವಕಾಶ ನೀಡಬೇಕು.

ವಿದ್ಯಾರ್ಥಿಗಳ ಜೀವನಕ್ಕಿಂತ ಪರೀಕ್ಷೆ ದೊಡ್ಡದಲ್ಲ. ಪರೀಕ್ಷೆ ನಡೆಸುವ ಮುನ್ನ ವಿದ್ಯಾರ್ಥಿಗಳಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಯುಜಿಸಿ ಕೂಡ ಈ ಹಿನ್ನಲೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಹೊರ ತಂದಿದೆ. ಆದರೆ ಕೆ.ಎಸ್.ಎಲ್.ಯು ಈ ಎಲ್ಲ ಆದೇಶ ಗಾಳಿಗೆ ತೂರಿ ಪರೀಕ್ಷೆ ನಡೆಸಲು ಹೊರಟಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಈ ಕೂಡಲೇ ಆದೇಶ ಹಿಂಪಡೆಯುವಂತೆ ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಇತೀ

ಮೊಹಮ್ಮದ್ ಫೀರ ಲಟಗೇರಿ

(ಕ್ಯಾಂಪಸ್ ಕಾರ್ಯದರ್ಶಿ -ಎಸ್.ಐ.ಓ ಕರ್ನಾಟಕ)

ಕಾನೂನು ಕೈಗೆತ್ತಿಕೊಳ್ಳುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ – ಎಸ್.ಐ.ಓ ಕರ್ನಾಟಕ

ಪತ್ರಿಕಾ ಪ್ರಕಟಣೆಗಾಗಿ

ಬೆಂಗಳೂರು:ಕೋಟ್ಯಾಂತರ ಮುಸ್ಲಿಮರು ಗೌರವಯುತವಾಗಿ ಕಾಣುವ ಪ್ರವಾದಿ ಮುಹಮ್ಮದ್ (ಸ) ನಿಂದನೆ ಖಂಡನೀಯ. ಅವರ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ ಪೋಸ್ಟ್ ಮಾಡಿರುವುದು ಅಕ್ಷಮ್ಯ. ಆದರೆ ಇಂತಹ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು.

ಕಾವಲ ಭೈರಸಂಧ್ರದಲ್ಲಿ ರಾತ್ರಿ ನಡೆದ ಘಟನೆ ದುರದೃಷ್ಟಕರ. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನೆಲದ ಕಾನೂನಿಗೆ ಗೌರವ ನೀಡಬೇಕಾಗಿರುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ನಿನ್ನೆಯ ಗಲಭೆಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನಿರಾಪರಾಧಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪಾರದರ್ಶಕವಾಗಿ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಎಲ್ಲ ಜನರು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸರಕಾರದೊಂದಿಗೆ ಕೈ ಜೋಡಿಸಬೇಕು. ಮಾಧ್ಯಮಗಳು ಕೂಡ ವಸ್ತುನಿಷ್ಠ ವರದಿಯನ್ನು ಬಿತ್ತರಿಸಬೇಕು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಎಸ್.ಐ.ಓ ಕರ್ನಾಟಕ ವಿನಂತಿಸುತ್ತದೆ.

ಶಾಲಾ ಪಠ್ಯ ಪುಸ್ತಕ ಕಡಿತ ಆತಂಕಕಾರಿ, ಕೊರೊನಾ ಸಂಧರ್ಭದಲ್ಲೂ ಬಿಜೆಪಿ ಸರಕಾರದ ನಡೆ ದ್ವೇಷದ ಪರಮಾವಧಿ ; ಜಿಶಾನ್ ಮಾನ್ವಿ. ಸರ್ಕಾರದ ನಡೆಗೆ ಎಸ್.ಐ.ಓ. ತೀರ ಆಕ್ಷೇಪ.

ಮಾನ್ವಿ, ಆಗಸ್ಟ್ 4 : ಕೊರೊನಾ ಸಾಂಕ್ರಾಮಿಕ ಕಾರಣವನ್ನು ಮುಂದಿಟ್ಟುಕೊಂಡು ಒಂದರಿಂದ ಹತ್ತನೇ ತರಗತಿಯ ವರೆಗೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಶೇಕಡ ಮೂವತ್ತು ರಷ್ಟು ಕಡಿತ ಮಾಡುತ್ತೇವೆಂದು ಸರ್ಕಾರ ಹೇಳಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರಾಗಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಮರು ವ್ಯಾಖ್ಯಾನಿಸುವ, ಮರುರೂಪಿಸುವ ಬಗೆಯ ಮೌಲಿಕ ಚರ್ಚೆಗಳು ನಡೆಯುತ್ತಿರುವಾಗಲೇ, ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿರುವ ಪಾಠಗಳ ಪಟ್ಟಿ ನೋಡಿದರೆ ಆತಂಕವೆನಿಸುತ್ತದೆ. ಈ ಬೆಳವಣಿಗೆಯು ಶಿಕ್ಷಣದ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಿದೆ. ಟಿಪ್ಪು ಸುಲ್ತಾನ ಸೇರಿದಂತೆ ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಪ್ರವಾದಿ ಮುಹಮ್ಮದ್ ಮತ್ತು ಜೀಸಸ್ ಕ್ರೈಸ್ತರ ಕುರಿತು ಇರುವ ಪಾಠಗಳನ್ನು ತೆಗೆದುಹಾಕಿರುವುದನ್ನು ಕಂಡರೆ ಬಿಜೆಪಿ ಸರ್ಕಾರ ಈ ಕೋವಿಡ್ ಸಂಧರ್ಭವನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಂಡಂತೆ ಕಾಣುತ್ತಿದೆ.

ಟಿಪ್ಪು ಸುಲ್ತಾನರವರನ್ನು ಹಿಂದಿನಿಂದಲೂ ತೀವ್ರವಾಗಿ ವಿರೋಧಿಸುತ್ತಲೇ ಬಂದಂತಹ ಬಿಜೆಪಿ ಸರ್ಕಾರದ ತನ್ನ ಕಾರ್ಯಸೂಚಿ ಸಾಧಿಸಲು ಟಿಪ್ಪು ಪಠ್ಯವನ್ನು ಕೈ ಬಿಡುವುದರ ಮೂಲಕ ಶಿಕ್ಷಣದ ಕೇಸರಿಕರಣ ಮಾಡಲು ಹೊರಟಿದೆ. ಟಿಪ್ಪು ಸುಲ್ತಾನ್ ವಿಚಾರ ಒಂದು ಜಾತಿ, ವರ್ಗಕ್ಕೆ ಸೇರಿದ್ದಲ್ಲ. ಇತಿಹಾಸದ ಭಾಗ. ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚಲು ಹೊರಟಿದೆ ಎಂದು ಜಿಶಾನ್ ಮಾನ್ವಿ ಆಕ್ರೋಶ ವ್ಯಕ್ತ ಪಡಿಸಿದರು.

“ಅಭಯ ರಾಣಿ” ಎಂದೇ ಹೆಸರಾದ ರಾಣಿ ಅಬ್ಬಕ್ಕನ ಪಾಠವನ್ನು ತೆಗೆದು ಹಾಕಿರುವುದು ಸಹ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದೆ. ಕೇರಳದ ಮಾಪಿಳ್ಳರ ಜೊತೆ ಸೇರಿ ನಾಲ್ಕು ದಶಕಗಳ ಕಾಲ ಪೋರ್ಚುಗೀಸರ ವಿರುದ್ಧ ಸಮಾಜದ ಎಲ್ಲಾ ಭಾಗದವರನ್ನು ಒಟ್ಟು ಗೂಡಿಸಿ ಹೋರಾಡಿದ ರಾಣಿಯ ಇತಿಹಾಸ ಬಿಜೆಪಿ ಸರ್ಕಾರಕ್ಕೆ ಇಷ್ಟವಿಲ್ಲದಂತಿದೆ. ಒಂದೇ ಸಂಸ್ಕೃತಿಯನ್ನು ಹೇರುವ ಉದ್ದೇಶವನ್ನು ಇಟ್ಟುಕೊಂಡಿರುವ ಬಿಜೆಪಿ ಸರಕಾರ ಈ ದುಷ್ಕೃತ್ಯಕ್ಕೆ ಕೈ ಹಾಕಿದೆ ಎಂದು ತಿಳಿದು ಬರುತ್ತದೆ.

ಕಡಿತದ ಪಟ್ಟಿ ಇಷ್ಟಕ್ಕೆ ಸೀಮಿತವಾಗದೆ 7ನೇ ತರಗತಿಯ ಪಠ್ಯಪುಸ್ತಕದಲ್ಲಿದ್ದ ಸಂವಿಧಾನ ರಚನಾ ಕರಡು ಸಮಿತಿ, ಸಂವಿಧಾನದ ಆತ್ಮವಾದ ಮುನ್ನುಡಿ ಮತ್ತು ರಾಜ್ಯ ನಿರ್ದೇಶನ ತತ್ವದ ಭಾಗವನ್ನು ಕೈ ಬಿಡಲಾಗಿದೆ, ಇದರ ಜೊತೆಯಲ್ಲೇ, ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಂತಹ ಪ್ರಾದೇಶಿಕ ಮಹತ್ವದ ವಿಷಯಗಳನ್ನು ಕಡಿತಗೊಳಿಸಿರುವುದು, ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಿಗೆ ಮಾಡಿದ ದ್ರೋಹವಾಗಿದೆ. ಇದೆ ರೀತಿಯಾಗಿ ಸೂಫಿ ಪಂಥ, ದೇಹೆಲಿ ಸುಲ್ತಾನರ ಕೊಡುಗೆಗಳು, ತುಳು ಸಂಸ್ಕೃತಿ, ಪಂಚಾಯತ್ ರಾಜ್ ನಲ್ಲಿ ಮಹಿಳೆ ಎಂಬ ಮಹತ್ವದ ಅಧ್ಯಾಯಗಳನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ.

ಪಠ್ಯ ಕಡಿತದ ಪಟ್ಟಿಯನ್ನು ಗಮನಿಸಿದಾಗ ಬಿಜೆಪಿ ಸರ್ಕಾರ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ,
ಮುಂತಾದ ವಿಷಯಗಳನ್ನು ಒಳಗೊಂಡ ಪಠ್ಯವನ್ನು ಕಡಿತ ಮಾಡುವ ದುರಾಲೋಚನೆ ಇಟ್ಟುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪಠ್ಯ ಕಡಿತ ಮಾಡುವುದೇ ಆದರೆ ವೈಜ್ಞಾನಿಕ ವಿಧಾನಮೇರೆಗೆ ಆಗಬೇಕು ಹೊರತು ರಾಜಕೀಯ ಲಾಭಕ್ಕಾಗಿ ಅಲ್ಲ ಎಂಬುವುದು ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೆಶನ್ ನ ನಿಲುವು ಆಗಿದೆ.

7 ನೇ ತರಗತಿ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ರಾಣಿ ಅಬ್ಬಕ್ಕ ಮತ್ತು ರಾಯಣ್ಣನ ಇತಿಹಾಸ ಕೈ ಬಿಟ್ಟ ರಾಜ್ಯ ಸರಕಾರದ ನಿರ್ಧಾರ ಖಂಡನಾರ್ಹ – ನಿಹಾಲ್ ಕಿದಿಯೂರು ರಾಜ್ಯಾಧ್ಯಕ್ಷರು ಎಸ್.ಐ.ಓ ಕರ್ನಾಟಕ

ಪತ್ರಿಕಾ ಪ್ರಕಟಣೆ

ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ 2020-21 ನೇ ಸಾಲಿನ ಶೈಕ್ಷಣಿಕ ಅವಧಿಯನ್ನು 120-140 ದಿನಗಳಿಗೆ ಮೊಟಕುಗೊಳಿಸಲು ತೀರ್ಮಾನಿಸಲಾಗಿದ್ದು ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಹೊರೆಯಾಗದಂತೆ ಸೇಕಡಾ 30% ಪ್ರತಿಶತದಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಲು ನಿರ್ಧರಿಸಲಾಗಿತ್ತು ಅದರಂತೆ ಶಾಲಾ ಪಠ್ಯಪುಸ್ತಕದ ಕೆಲವು ಅಧ್ಯಾಯಗಳನ್ನು ಕೈ ಬಿಡಲು ತಿಳಿಸಿತ್ತು ಅದರ ಬೆನ್ನಲ್ಲೇ ರಾಜ್ಯ ಸರ್ಕಾರವು ದಿನಾಂಕ 28/07/2020 ರಂದು 1 ರಿಂದ 10 ನೇ ತರಗತಿಯ ಪಠ್ಯಕ್ರಮದ ಕೆಲವು ಮಹತ್ವದ ಪಾಠವನ್ನು ಕಡಿತಗೊಳಿಸಿರುವುದನ್ನು ಪ್ರಕಟಿಸಿದೆ.

ಟಿಪ್ಪು ಹೈದರ್ ಅಲಿ ರಾಣಿ ಅಬ್ಬಕ್ಕ ಮತ್ತು ಶಾಲಾ ಪಠ್ಯಕ್ರಮದಿಂದ ಜೀಸಸ್ ಹಾಗೂ ಮೊಹಮ್ಮದ್ ಅವರಂತಹ ವ್ಯಕ್ತಿಗಳನ್ನು ತ್ಯಜಿಸುವುದು ಬಹುವಚನ ನೀತಿಗಳಿಂದ ದೂರವಿರುವುದರ ಸ್ಪಷ್ಟ ಸಂಕೇತ ಮತ್ತು ಭಾರತೀಯ ನಾಗರಿಕತೆಯ ಒಳಗೊಳ್ಳುವಿಕೆ ವಿರುದ್ಧದ ನಡೆಯಾಗಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತನ್ನ ಟಿಪ್ಪು ವಿರೋಧಿ ನೀತಿಯನ್ನು ಮತ್ತು ಕೇಸರಿಕರಣದ ಒಳ ಸಂಚನ್ನು ಸಾಕಾರಗೊಳಿಸಲು ಉದ್ದೇಶ ಪೂರ್ವಕವಾಗಿ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯವರ ಮೈಸೂರು ಸಾಮ್ರಾಜ್ಯದ ಇತಿಹಾಸವನ್ನು ಮರೆಮಾಚುವ ಪ್ರಯತ್ನ ಇದಾಗಿದೆ.

ಬಿಜೆಪಿ ಸರ್ಕಾರವು ಹಿಂದಿನಿಂದಲೂ ತನ್ನ ರಾಜಕೀಯ ಉದ್ದೇಶಕ್ಕಾಗಿ ಕನ್ನಡ ನಾಡಿನ ಹೆಮ್ಮೆಯ ದೊರೆ ರಾಕೆಟ್ ತಂತ್ರಜ್ಞಾನದ ಜನಕ ತನ್ನ ಆಡಳಿತ ಅವಧಿಯಲ್ಲಿ ಪರಧರ್ಮ ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದ ಮೊದಲ ಸ್ವಾತಂತ್ರ್ಯ ಹೋರಾಟಗಾರನಾದ ಹಜರತ್ ಟಿಪ್ಪು ಸುಲ್ತಾನ್ ರ ನೈಜ ಇತಿಹಾಸವನ್ನು ತಿರುಚಲು ಷಡ್ಯಂತ್ರ ನಡೆಯುತ್ತಿರುವುದು ಸತ್ಯವಾಗಿದೆ ತಳಮಟ್ಟದಲ್ಲಿಯೆ ಇತಿಹಾಸವನ್ನು ಚಿವುಟಲು ಶಾಲಾ ಮಕ್ಕಳಿಗೆ ಕಲಿಸುವ ಇತಿಹಾಸದ ಪಾಠವನ್ನೆ ಕೊರೋನಾ ನೆಪದಲ್ಲಿ ವಿಧ್ಯಾರ್ಥಿಗಳಿಗೆ ಕಲಿಸದಿರಲು ಬಿಜೆಪಿ ಸರ್ಕಾರ ತನ್ನ ಜಾಣ ನಡೆಯ ಮೂಲಕ ಕಾರ್ಯಸಿದ್ಧಿಗೆ ಅಣಿಯಾಗಿದೆ.

ಈ ನಿರ್ಧಾರದ ಕುರಿತಂತೆ ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಸೊಸೈಟಿಯ (KSTBS) ಅಧಿಕಾರಿಗಳು ಟಿಪ್ಪು ಸುಲ್ತಾನ್ ಕುರಿತ ಮೈಸೂರು ಸಾಮ್ರಾಜ್ಯದ ಅಧ್ಯಯನಗಳು 6 ನೇ ಮತ್ತು 10 ನೇ ತರಗತಿಯಲ್ಲಿ ವಿವರವಾಗಿದ್ದು ಅದು ಪುನರಾವರ್ತನೆ ಆಗಬಾರದು ಎಂಬ ನಿಟ್ಟಿನಲ್ಲಿ 7 ನೇ ತರಗತಿಯ ಪಠ್ಯ ಪುಸ್ತಕದಿಂದ ಕೈ ಬಿಡಲಾಗಿದೆ ಎಂಬುದನ್ನು ಸಮರ್ಥಿಸಿಕೊಂಡಿರುವುದು ಮೇಲ್ನೋಟಕ್ಕೆ ನಾಟಕೀಯ ಬೆಳವಣಿಯಾಗಿದೆ ಈ ವಿಚಾರವನ್ನು ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯೂ (DSERT) ತನ್ನ ಅಧಿಕೃತ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಕೇವಲ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯ ಪಾಠವನ್ನು ಕೈ ಬಿಡದೆ 6 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಏಸು ಕ್ರೈಸ್ತ ಮತ್ತು ಪ್ರವಾದಿ ಮುಹಮ್ಮದ್ (ಸ) ರವರ ಭೋಧನೆಗಳನ್ನು ಕೂಡಾ ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ.

ಇದೇ ಪ್ರಕಾರವಾಗಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯೂ ಕೆಲವು ದಿನಗಳ ಹಿಂದೆ ಸಿಬಿಎಸ್ಇ(CBSE) ಪಠ್ಯಕ್ರಮವನ್ನು ಕಡಿತಗೊಳಿಸುವ ಸೂಚನೆ ನೀಡಿತ್ತು ಅದರ ಅನ್ವಯ (NCERT) ಪಠ್ಯಕ್ರಮವನ್ನು ಕಡಿತಗೊಳಿಸಲು ನಿರ್ಧರಿಸಿ ವಿವಿಧ ತರಗತಿಯ ‌ಸಮಾಜ ವಿಜ್ಞಾನ ವಿಷಯದ ಪೌರತ್ವ ಜಾತ್ಯಾತೀತತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಸಂಬಂಧಿತ ಕೆಲವು ಪಠ್ಯವನ್ನು ಕೈ ಬಿಡುವುದಾಗಿ ಹೇಳಿಕೊಂಡಿತ್ತು.

ಇವೆಲ್ಲ ಚಟುವಟಿಕೆಗಳು ನೋಡಿದ ಮೇಲೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಬಿಜೆಪಿ ಸರ್ಕಾರವು ನಡೆಸುತ್ತಿರುವ ವ್ಯವಸ್ಥಿತ ದಾಳಿಯಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಆದ್ದರಿಂದ ಇಂತಹ ಪಕ್ಷಪಾತ ಧೋರಣೆಯಿಂದ ಕೂಡಿದ ನಿರ್ಧಾರವನ್ನು ರಾಜ್ಯ ಸರಕಾರ ಕೈ ಬಿಟ್ಟು ಕರ್ನಾಟಕ ಇತಿಹಾಸದ ಪ್ರಮುಖ ಭಾಗವಾದ ಟಿಪ್ಪು ಸುಲ್ತಾನ ಪಠ್ಯಕ್ರಮ ಸೇರಿದಂತೆ ಕೈ ಬಿಟ್ಟಿರುವ ಪ್ರಮುಖ ಪಠ್ಯಕ್ರಮಗಳನ್ನು ಸೇರಿಸಬೇಕೆಂದು ‌ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.