ಶಾಸಕರಿಂದ ಸರಕಾರಿ ಶಾಲೆಯ ದತ್ತು ನಿರ್ಣಯ – ಸಂವಾದ, ಸಲಹೆ

ನಿರೂಪಣೆ: ಪೀರ್ ಲಟಗೇರಿ (ಕ್ಯಾಂಪಸ್ ಕಾರ್ಯದರ್ಶಿ, ಎಸ್.ಐ.ಓ ಕರ್ನಾಟಕ)

2020-21 ನೇ ಸಾಲಿಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸುವ ಕುರಿತು ದಿನಾಂಕ 05/03/2020 ರಂದು ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ರವರು ವಿಧಾನ ಮಂಡಳದಲ್ಲಿ ಮಂಡಿಸಿದ 2020-21 ನೆ ಸಾಲಿನ ಆಯವ್ಯಯ ಭಾಷಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂಬ ಹೇಳಿಕೆಗೆ ಬಲ ನೀಡುವಂತೆ ಸರ್ಕಾರವು ಈ ಕುರಿತಾಗಿ ದಿನಾಂಕ 03/07/2020 ರಂದು ಆದೇಶ ಹೊರಡಿಸಿದೆ.

ಸರ್ಕಾರದ ಈ ತೀರ್ಮಾನದ ಕುರಿತು ಬಹಳ ಗೊಂದಲಗಳಿದ್ದು ಈ ಯೋಜನೆಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ನೆಪದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂಬ ಅನುಮಾನಗಳು ಶಿಕ್ಷಣ ತಜ್ಞರ ಹಾಗೂ ವಿದ್ಯಾರ್ಥಿ ಸಂಘಟನೆಗಳ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ವಿಮರ್ಶೆ ಮಾಡಲಾಗಿದ್ದು ಅದರ ದುಷ್ಪರಿಣಾಮಗಳು ಮತ್ತು ಮುಂದಾಗುವ ಅನಾಹುತಗಳ/ ಆತಂಕಗಳ ಬಗ್ಗೆ ಕೆಲವು ಅಂಶಗಳನ್ನು ಈ ಕೆಳಕಂಡಂತೆ ಹೆಸರಿಸಲಾಗಿದೆ.

ಸರ್ಕಾರಕ್ಕೆ ಸಲಹೆಗಳು / ಸರ್ಕಾರ ಮಾಡಬೇಕಾಗಿರುವ ಕೆಲಸ.

1) ಎಸ್ಡಿಎಂಸಿ ಬಲವರ್ಧನೆ ಮತ್ತು ಅಭಿವೃದ್ಧಿಗಾಗಿ ಶಾಲೆಗಳನ್ನು ಪಂಚಾಯಿತಿ ಸುಪರ್ದಿಗೆ ವಹಿಸಬೇಕು.

2) ತಕ್ಷಣವೇ ಅಂದಾಜು 30 ಸಾವಿರ ಖಾಲಿ ಇರುವ ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು.

3) ರಾಜ್ಯದಲ್ಲಿ ನೆರೆ ಹಾವಳಿಯಿಂದ ಮುಳುಗಿರುವ ಮತ್ತು ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಶಾಲೆಗಳ ಸಮೀಕ್ಷೆ ನಡೆಸಿ ಅವುಗಳ ದುರಸ್ತಿ‍ ಕಾರ್ಯವನ್ನು ತೀವ್ರ ಗತಿಯಲ್ಲಿ ಮಾಡಬೇಕು.

4) ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮಿತಿ ರಚಿಸಬೇಕು.

5) ಸರ್ಕಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರಾಮಾಣಿಕ ಶಿಕ್ಷಣ ತಜ್ಞರ ಮತ್ತು ವಿದ್ಯಾರ್ಥಿ ಸಂಘಟನೆಗಳ ಹಾಗೂ ಪಾಲಕರ ಅಭಿಪ್ರಾಯ ಮತ್ತು ಅವರೊಂದಿಗೆ ಚರ್ಚೆ ಮಾಡಬೇಕು, ಇದು ಪ್ರಜಾಪ್ರಭುತ್ವ ಬೇಡಿಕೆಯಾಗಿದೆ.

4) ರಾಜ್ಯದ ಸರ್ಕಾರಿ ಶಾಲೆಗಳ ಮತ್ತು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕ ಇಚ್ಛಾಶಕ್ತಿ ಇದ್ದಲ್ಲಿ ಸರ್ಕಾರ ಸ್ಥಳೀಯ ಸರಕಾರವಾದ ಪಂಚಾಯತಿಗೆ ಜವಾಬ್ದಾರಿ ನೀಡಿ ಎಸ್ಡಿಎಂಸಿ ಮತ್ತು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಶಾಸಕರ ಪ್ರದೇಶಾಭಿವೃದ್ಧಿಗೆ ನೀಡುವ ಅನುಧಾನವನ್ನು ಇವರಿಗೆ ನೀಡಬೇಕು.

ಸರ್ಕಾರದ ಈ ತೀರ್ಮಾನದಿಂದ ಆಗುವ ಅನಾಹುತಗಳು.

1) ಸಾರ್ವಜನಿಕ ಶಿಕ್ಷಣ ದುರ್ಬಲಗೊಳ್ಳುವ ಸಾಧ್ಯತೆ.

2) ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಉತ್ತೇಜನ.

3)ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ವ್ಯಕ್ತಿಯನ್ನು ಸರ್ಕಾರ ಶಿಕ್ಷಣ ತಜ್ಞರನ್ನಾಗಿ ನೇಮಿಸಿ ಅವರ ಸಲಹೆಯಂತೆ ವರ್ತಿಸುವುದು ಅತ್ಯಂತ ಖೇದಕರ ಸಂಗತಿ.

4) ಶಾಸಕರನ್ನು ಶಾಲಾ ಅಭಿವೃದ್ಧಿ ನೆಪದಲ್ಲಿ ಮಧ್ಯವರ್ತಿಯನ್ನಾಗಿ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.

5) ಶಾಸಕರ ಸುಪರ್ದಿಗೆ ಶಾಲೆಗಳನ್ನು ನೀಡಿದ್ದಲ್ಲಿ ಶಾಸಕರ ಹಿಂಬಾಲಕರು ಎಸ್ಡಿಎಂಸಿ ಸದಸ್ಯರಾಗುವ ಸಾಧ್ಯತೆ ಇದೆ.

6) ಶಿಕ್ಷಣ ಕ್ಷೇತ್ರದಲ್ಲಿ ನೇರ ರಾಜಕೀಯ ಹಸ್ತಕ್ಷೇಪ ಮಾಡಿದಂತಾಗುತ್ತದೆ.

7) ಪ್ರಜಾಸತ್ತಾತ್ಮಕವಾಗಿ ಆಯ್ಕೆ ನಡೆಯುತ್ತಿರುವ ಎಸ್ಡಿಎಂಸಿ ಸದಸ್ಯರನ್ನು ಹೊರಗಿಟ್ಟು ಶಾಲೆಗಳು ರಾಜಕೀಯ ಹಿಂಬಾಲಕರ ಗೂಡಾಗಿ ಪರಿವರ್ತನೆ ಆಗಲಿದೆ.

8) ಶಾಲೆಗಳು ಪಕ್ಷ ರಾಜಕಾರಣದ ವೇದಿಕೆಯಾಗಿ ಪಕ್ಷದ ಸಿದ್ಧಾಂತವನ್ನು ಮುಗ್ಧ ಮಕ್ಕಳ ಮೇಲೆ ಹೇರುವ ಸಂಭವವಿದೆ.

9) ಸ್ವಹಿತಾಸಕ್ತಿ ರಾಜಕಾರದ ಅಸ್ತ್ರವಾಗಿರುವ ಜಾತಿ ಧರ್ಮಗಳು ಶಾಲೆಯ ವಾತಾವರಣದಲ್ಲಿ ಒಳ ನುಸುಳುವ ಅನುಮಾನವಿದೆ.