ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಶೀಘ್ರ ಪ್ರಕಟ ಮಾಡುವಂತೆ ಎಸ್.ಐ.ಓ ಕಲಬುರಗಿ ಆಗ್ರಹ.

ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇದರ ಸಂಯೋಜಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ನ ಪರೀಕ್ಷಾ ಫಲಿತಾಂಶ ಇನ್ನೂ ಪ್ರಕಟ ಮಾಡಿಲ್ಲ, ಇದೇ ಸಂದರ್ಭದಲ್ಲಿ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಇಡಿ ಕೋರ್ಸಿನ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ.

ಫಲಿತಾಂಶ ಪ್ರಕಟ ಆಗದೆ ಇರುವುದರಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ದಾಖಲಾತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

2021-22 ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ(B.Ed) ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದಡಿ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿದ್ದರು.

ಆನ್ಲೈನ್ ನಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ಪರಿಗಣಿಸಿ, ಮೆರಿಟ್ ನಿಯಮದನ್ವಯ ಸೀಟು ಹಂಚಿಕೆಯಾಗಿದ್ದು, ಅರ್ಹತಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಅನ್ವಯ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಗಾಗಿ ಜಿಲ್ಲಾ ನೋಡಲ್ ಕೇಂದ್ರ/ವ್ಯವಸ್ಥಾಪಕ ಕೇಂದ್ರಕ್ಕೆ (CTE/DIET) ಹಾಜರಾಗಲು ದಿನಾಂಕವನ್ನು ನಿಗದಿಪಡಿಸಿದೆ.

ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ತಮಗೆ ಸೀಟು ಹಂಚಿಕೆಯಾದ ಸಂಸ್ಥೆ/ಕಾಲೇಜಿಗೆ ದಾಖಲಾಗಲು ಇಚ್ಛಿಸುವವರು ತಮ್ಮ ಮೂಲ ದಾಖಲೆಗಳನ್ನು ಹೊಂದಿಕೆ ಮಾಡಿಕೊಳ್ಳಬೇಕಾಗಿದೆ.

ಅರ್ಹತಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಯು ಡಿಸೆಂಬರ್ 2 ರಿಂದ 10 ನೇ ತಾರೀಖಿನವರೆಗೆ ನಡೆಸಲಾಗುತ್ತಿದೆ.

ಪರಿಶೀಲನೆ ಮತ್ತು ದಾಖಲಾತಿ ಸಂದರ್ಭದಲ್ಲಿ ಸ್ನಾತಕ ಪದವಿಯ ಉತ್ತೀರ್ಣ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಾಗಿದೆ ಹಾಗೂ ವೇಳಾಪಟ್ಟಿ ಯಂತೆ ನಿಗದಿತ ದಿನದಂದು ತಪ್ಪದೇ ಹಾಜರಾಗಲು ತಿಳಿಸಲಾಗಿದೆ.

ಈಗಾಗಲೇ ಅನೇಕ ಅಭ್ಯರ್ಥಿಗಳು ಪ್ರಮಾಣ ಪತ್ರ ಪರಿಶೀಲನೆಗೆ ಹಾಜರಾಗಿದ್ದು ಪದವಿಯ ಫಲಿತಾಂಶ ಇಲ್ಲದೆ ಸೀಟು ಹಂಚಿಕೆಯಾಗಿದ್ದರು ದಾಖಲಾತಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸದೆ ಇದ್ದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಲಭಿಸುವಿಕೆಯಿಂದ ವಂಚಿತರಾಗುವ ಆತಂಕದಲ್ಲಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.

ವಿಶ್ವವಿದ್ಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಫಲಿತಾಂಶ ಪ್ರಕಟ ಮಾಡಲು ಸಿದ್ಧತೆ ನಡೆಸಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ಸರ್ಕಾರಿ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು ಪರಸ್ಪರ ಸಹಕಾರದ ಮತ್ತು ಹೊಂದಾಣಿಕೆಯ ವ್ಯವಹಾರದ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ ಕಲಬುರಗಿ ಘಟಕದ ಅಧ್ಯಕ್ಷರಾದ ಸಿರಾಜ್ ಶಾಹ್ನಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ನೂತನ ಶಿಕ್ಷಣ ನೀತಿ – ಎಸ್.ಐ.ಓ ವಿದ್ಯಾರ್ಥಿ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ

ಉಡುಪಿ : ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಈ ಬಾರಿಯ ವಿಧಾನ ಸಭೆಯಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಎಸ್.ಐ.ಓ ಉಡುಪಿ ಜಿಲ್ಲಾ ವತಿಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ರೀತಿ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಜಾರಿ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳು ಗೊಂದಲಕಾರಿಯಾಗಿದ್ದು ಅವುಗಳನ್ನು ಮರೆಮಾಚುವ ಉದ್ದೇಶದಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅದನ್ನು ಜಾರಿಗೊಳಿಸಲು ಹೊರಟಿದೆ ಎಂಬುದು ಒಂದು ವಾದವಾದರೆ ಮತ್ತೊಂದೆಡೆ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಷಡ್ಯಂತ್ರ ಅಡಗಿದೆ ಎಂಬುದು ಅಧ್ಯಯನಶೀಲರ ವಾದವಾಗಿದೆ ಎಂದು ಡಾ.ಫಹೀಮ್ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದ್ದ ಬದಲಾವಣೆಗಳ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಚರ್ಚೆ ನಡೆಸಿದ ನಂತರ ಗೋಚರವಾಗುವ ತಪ್ಪು ಅಥವಾ ಗೊಂದಲಕಾರಿ ವಿಷಯಗಳನ್ನು ತಿದ್ದುಪಡಿಗೆ ತಂದು, ಒಳ್ಳೆಯ ಅಂಶಗಳನ್ನು ಪುಷ್ಟೀಕರಿಸಿ ಅದನ್ನು ಸದನದಲ್ಲಿ ಮಂಡಿಸಿ ರಾಜ್ಯಕ್ಕೆ ಅನುಗುಣವಾಗುವ ಸಮಗ್ರ ನೂತನ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಜಾರಿಗೊಳಿಸುವುದು ಉತ್ತಮ ಕ್ರಮವಾಗಿದೆ ಎಂಬುದನ್ನು ಎಸ್.ಐ.ಓ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಬಯಸುತ್ತದೆ.

ಈ ರಾಷ್ಟ್ರೀಯ ಶಿಕ್ಷಣ ನೀತಿಯು 3 ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುತ್ತದೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯದಿಂದ ತಿಳಿದಿಕೊಂಡಿದ್ದೇವೆ ಆದರೆ, ಈ ನೀತಿಯ ಕೈಪಿಡಿಯನ್ನು ರಾಜ್ಯದ ಜನತೆಗೆ ಲಭ್ಯವಾಗಿಸಿ ಚರ್ಚೆ-ಸಂವಾದಕ್ಕೆ ಮುಕ್ತ ಅವಕಾಶ ನೀಡಿ ಅದರ ವಿಮರ್ಶೆ ಮತ್ತು ವಿಶ್ಲೇಷಣೆಗೆ ಅವಕಾಶ ಕಲ್ಪಿಸದೇ ನಮ್ಮ ರಾಜ್ಯ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದು ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಮೊದಲಿಗೆ ಜಾರಿ ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.

ಶಿಕ್ಷಣ ಹಕ್ಕು ಕಾಯಿದೆ ಕಲಂ 6, 9, 21 ಹಾಗು 22 ರ ಅನ್ವಯ ಶಾಲಾ ಮತ್ತು ಪಂಚಾಯತಿ ಹಂತದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮತ್ತು ಗ್ರಾಮ ಪಂಚಾಯತಿಗಳ ಮೇಲಿರುವುದರಿಂದ ನೀತಿಯನ್ನು ಸಾರ್ವಜನಿಕರ ಓದಿಗೆ ಮತ್ತು ಚರ್ಚೆಗೆ ಅವಕಾಶ ನೀಡಿ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಮೂಲ ವಾರಸುದಾರರಾದ ನಾವು ನಮ್ಮ ಮಕ್ಕಳ ಶಿಕ್ಷಣವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ತಿಳಿಯದೆ ಅದನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಸರಿಯಾದ ಪ್ರಕ್ರಿಯೆಯಲ್ಲ.
ಆದ್ದರಿಂದ, ಅದನ್ನು ತರಾತುರಿಯಾಗಿ ಜಾರಿಗೊಳಿಸಬಾರದೆಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ.

ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ಜನ ಸ್ನೇಹಿ ಕೈಪಿಡಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿ ಶಾಲೆ, ಪಂಚಾಯತಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಈ ಚರ್ಚೆಗಳ ಆಧಾರದ ಮೇಲೆ ನಮ್ಮ ರಾಜ್ಯಕ್ಕೆ ಅನುವಾಗುವ “ಕರ್ನಾಟಕ ಶಿಕ್ಷಣ ನೀತಿ”(ಕಶಿನೀ) ರೂಪಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ.

ಕರ್ನಾಟಕ ಶಿಕ್ಷಣ ನೀತಿಯನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡರಲ್ಲೂ ಮಂಡಿಸಿ, ಚರ್ಚಿಸಿ ಅಂಗೀಕರಿಸಿದ ನಂತರವೇ ಜಾರಿಗೊಳಿಸಬೇಕೇಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ ಎಂದು ಫಹೀಮ್ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ನಾಸೀರ್, ಅಯನ್ ಮಲ್ಪೆ, ವಸೀಮ್ ಹೂಡೆ, ಶಾರೂಕ್ ಮುಂತಾದವರು ಉಪಸ್ಥಿತರಿದ್ದರು.

ಎಸ್.ಐ.ಓ ಭಟ್ಕಳದ ವತಿಯಿಂದ ಆರ್.ಟಿ.ಇ ಸಂಬಂಧಿತ ಮಾಹಿತಿಗಾಗಿ ಬಿ.ಇ.ಓ ಭೇಟಿ

ಭಟ್ಕಳ: ಎಸ್‌.ಐ.ಓ ಕಾರ್ಯಕರ್ತರು ಮತ್ತು ಎಚ್.ಆರ್.ಎಸ್ ಕಾರ್ಯಕರ್ತರು ಭಟ್ಕಳದ ಬಿ.ಇ.ಓ ಗೆ ಭೇಟಿಯಾದರು.

ಭೇಟಿಯ ಸಂದರ್ಭದಲ್ಲಿ ಶಿಕ್ಷಣ ಹಕ್ಕು ಕಾಯಿದೆಗೆ ಸಂಬಂಧಿಸಿದಂತೆ ಅವರಲ್ಲಿ ಮಾಹಿತಿ ಪಡೆದು, ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು.

ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ನೂತನ ಶಿಕ್ಷಣ ನೀತಿ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ

ರಾಯಚೂರು: ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ಜನಪ್ರತಿನಿಧಿಗಳು ಕೇಂದ್ರ ಸರಕಾರ ಅನುಷ್ಠಾನಕ್ಕೆ ತರಲಿರುವ ನೂತನ ಶಿಕ್ಷಣ ನೀತಿಯನ್ನು ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ನೂತನ ಶಿಕ್ಷಣ ನೀತಿಯಲ್ಲಿ ಇರುವ ಅಂಶಗಳು ವಿಧಾನ ಸಭೆಯಲ್ಲಿ ಚರ್ಚೆಯಾಗಬೇಕು. ಅದರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ನಾಗರಿಕರ ಮುಂದೆ ಸ್ಪಷ್ಟವಾಗಬೇಕೆಂದು ಆಗ್ರಹಿಸಿದ್ದಾರೆ.

ಲಿಂಗಸೂರು, ಸಿಂಧನೂರು ಮತ್ತು ರಾಯಚೂರು ಘಟಕದ ಕಾರ್ಯಕರ್ತರು ಮನವಿ ಸಲ್ಲಿಸಿ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದೆ.

ಅರಿವು ಸಾಲ ಮಂಜೂರಾತಿಗೆ ವಿಳಂಬ – ಶೀಘ್ರ ಬಿಡುಗಡೆ ಎಸ್.ಐ.ಓ ಉಡುಪಿ ಆಗ್ರಹ

ಉಡುಪಿ: ಕರ್ನಾಟಕ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಅರಿವು ಸಾಲದ ಮೊತ್ತ ಜೂನ್ ತಿಂಗಳಲ್ಲಿ ಮಂಜೂರು ಆಗುತ್ತಿದ್ದು ಆದರೆ ಈ ಬಾರಿ ಬಹಳ ವಿಳಂಬವಾಗಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಬಹಳ ಕಷ್ಟಕರವಾಗುತ್ತಿದೆ ಎಂದು ಎಸ್ ಐ ಓ ಜಿಲ್ಲಾದ್ಯಕ್ಷ ನಾಸೀರ್ ಹೂಡೆ ತಿಳಿಸಿದ್ದಾರೆ.

ಇವರು ಇಂದು ಮುಖ್ಯಮಂತ್ರಿ ಮತ್ತು ರಾಜ್ಯ ಅಲ್ಪಸಂಖ್ಯಾತ ಇಲಾಖೆಯಗೆ ಮನವಿಯನ್ನು ಸಲ್ಲಿಸುತ್ತಾ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಧರ್ಮಧ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ರೀತಿಯ ಸಾಲದ ಮೊತ್ತವನ್ನು ಆಯಾ ಕಾಲೇಜುಗಳಿಗೆ ಲಭಿಸಲಿಲ್ಲ. ಮತ್ತು ಕೆ. ಎಂ. ಡಿ. ಸಿ ಯವರು ಜೂನ್ ತಿಂಗಳಿಂದ ಹಣ ಬಿಡುಗಡೆ ಆಗುತ್ತದೆ ಎಂಬ ಸುಳ್ಳು ಭರವಸೆಯನ್ನು ನೀಡುತ್ತಿದೆ. ಸಾಲದ ಮೊತ್ತವನ್ನೇ ನಂಬಿದ ವಿದ್ಯಾರ್ಥಿಗಳಿಗೆ ಇದೀಗ ದಿಕ್ಕಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಂಬಂಧ ಪಟ್ಟವರು ಇದರ ಬಗ್ಗೆ ಪ್ರಶ್ನಿಸಿ ವಿದ್ಯಾಥಿಗಳ ಜೀವನಕ್ಕೆ ಆಸರೆಯಾಗಬೇಕಿದೆ. ಅದರ ಜೊತೆಯಲ್ಲೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಲಭಿಸುತ್ತಿದ್ದು ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭಿಸದೆ ವಿಳಂಬವಾಗುತ್ತಿದೆ ಈ ಬಗ್ಗೆ ತಾವುಗಳು ಸಂಬಂಧಪಟ್ಟ ಇಲಾಖೆಯ ಜೊತೆ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಶಾರೂಕ್, ಸದಸ್ಯರಾದ ಅಫ್ವಾನ್, ವಸೀಮ್, ಸಲಾವುದ್ದೀನ್, ಅಯಾನ್ ಮತ್ತು ರಿಝಾನ್ ಉಪಸ್ಥಿತರಿದ್ದರು.