ಶಾಲಾ ಪಠ್ಯ ಪುಸ್ತಕ ಕಡಿತ ಆತಂಕಕಾರಿ, ಕೊರೊನಾ ಸಂಧರ್ಭದಲ್ಲೂ ಬಿಜೆಪಿ ಸರಕಾರದ ನಡೆ ದ್ವೇಷದ ಪರಮಾವಧಿ ; ಜಿಶಾನ್ ಮಾನ್ವಿ. ಸರ್ಕಾರದ ನಡೆಗೆ ಎಸ್.ಐ.ಓ. ತೀರ ಆಕ್ಷೇಪ.

Share Post

ಮಾನ್ವಿ, ಆಗಸ್ಟ್ 4 : ಕೊರೊನಾ ಸಾಂಕ್ರಾಮಿಕ ಕಾರಣವನ್ನು ಮುಂದಿಟ್ಟುಕೊಂಡು ಒಂದರಿಂದ ಹತ್ತನೇ ತರಗತಿಯ ವರೆಗೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಶೇಕಡ ಮೂವತ್ತು ರಷ್ಟು ಕಡಿತ ಮಾಡುತ್ತೇವೆಂದು ಸರ್ಕಾರ ಹೇಳಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರಾಗಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಮರು ವ್ಯಾಖ್ಯಾನಿಸುವ, ಮರುರೂಪಿಸುವ ಬಗೆಯ ಮೌಲಿಕ ಚರ್ಚೆಗಳು ನಡೆಯುತ್ತಿರುವಾಗಲೇ, ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿರುವ ಪಾಠಗಳ ಪಟ್ಟಿ ನೋಡಿದರೆ ಆತಂಕವೆನಿಸುತ್ತದೆ. ಈ ಬೆಳವಣಿಗೆಯು ಶಿಕ್ಷಣದ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಿದೆ. ಟಿಪ್ಪು ಸುಲ್ತಾನ ಸೇರಿದಂತೆ ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಪ್ರವಾದಿ ಮುಹಮ್ಮದ್ ಮತ್ತು ಜೀಸಸ್ ಕ್ರೈಸ್ತರ ಕುರಿತು ಇರುವ ಪಾಠಗಳನ್ನು ತೆಗೆದುಹಾಕಿರುವುದನ್ನು ಕಂಡರೆ ಬಿಜೆಪಿ ಸರ್ಕಾರ ಈ ಕೋವಿಡ್ ಸಂಧರ್ಭವನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಂಡಂತೆ ಕಾಣುತ್ತಿದೆ.

ಟಿಪ್ಪು ಸುಲ್ತಾನರವರನ್ನು ಹಿಂದಿನಿಂದಲೂ ತೀವ್ರವಾಗಿ ವಿರೋಧಿಸುತ್ತಲೇ ಬಂದಂತಹ ಬಿಜೆಪಿ ಸರ್ಕಾರದ ತನ್ನ ಕಾರ್ಯಸೂಚಿ ಸಾಧಿಸಲು ಟಿಪ್ಪು ಪಠ್ಯವನ್ನು ಕೈ ಬಿಡುವುದರ ಮೂಲಕ ಶಿಕ್ಷಣದ ಕೇಸರಿಕರಣ ಮಾಡಲು ಹೊರಟಿದೆ. ಟಿಪ್ಪು ಸುಲ್ತಾನ್ ವಿಚಾರ ಒಂದು ಜಾತಿ, ವರ್ಗಕ್ಕೆ ಸೇರಿದ್ದಲ್ಲ. ಇತಿಹಾಸದ ಭಾಗ. ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚಲು ಹೊರಟಿದೆ ಎಂದು ಜಿಶಾನ್ ಮಾನ್ವಿ ಆಕ್ರೋಶ ವ್ಯಕ್ತ ಪಡಿಸಿದರು.

“ಅಭಯ ರಾಣಿ” ಎಂದೇ ಹೆಸರಾದ ರಾಣಿ ಅಬ್ಬಕ್ಕನ ಪಾಠವನ್ನು ತೆಗೆದು ಹಾಕಿರುವುದು ಸಹ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದೆ. ಕೇರಳದ ಮಾಪಿಳ್ಳರ ಜೊತೆ ಸೇರಿ ನಾಲ್ಕು ದಶಕಗಳ ಕಾಲ ಪೋರ್ಚುಗೀಸರ ವಿರುದ್ಧ ಸಮಾಜದ ಎಲ್ಲಾ ಭಾಗದವರನ್ನು ಒಟ್ಟು ಗೂಡಿಸಿ ಹೋರಾಡಿದ ರಾಣಿಯ ಇತಿಹಾಸ ಬಿಜೆಪಿ ಸರ್ಕಾರಕ್ಕೆ ಇಷ್ಟವಿಲ್ಲದಂತಿದೆ. ಒಂದೇ ಸಂಸ್ಕೃತಿಯನ್ನು ಹೇರುವ ಉದ್ದೇಶವನ್ನು ಇಟ್ಟುಕೊಂಡಿರುವ ಬಿಜೆಪಿ ಸರಕಾರ ಈ ದುಷ್ಕೃತ್ಯಕ್ಕೆ ಕೈ ಹಾಕಿದೆ ಎಂದು ತಿಳಿದು ಬರುತ್ತದೆ.

ಕಡಿತದ ಪಟ್ಟಿ ಇಷ್ಟಕ್ಕೆ ಸೀಮಿತವಾಗದೆ 7ನೇ ತರಗತಿಯ ಪಠ್ಯಪುಸ್ತಕದಲ್ಲಿದ್ದ ಸಂವಿಧಾನ ರಚನಾ ಕರಡು ಸಮಿತಿ, ಸಂವಿಧಾನದ ಆತ್ಮವಾದ ಮುನ್ನುಡಿ ಮತ್ತು ರಾಜ್ಯ ನಿರ್ದೇಶನ ತತ್ವದ ಭಾಗವನ್ನು ಕೈ ಬಿಡಲಾಗಿದೆ, ಇದರ ಜೊತೆಯಲ್ಲೇ, ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಂತಹ ಪ್ರಾದೇಶಿಕ ಮಹತ್ವದ ವಿಷಯಗಳನ್ನು ಕಡಿತಗೊಳಿಸಿರುವುದು, ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಿಗೆ ಮಾಡಿದ ದ್ರೋಹವಾಗಿದೆ. ಇದೆ ರೀತಿಯಾಗಿ ಸೂಫಿ ಪಂಥ, ದೇಹೆಲಿ ಸುಲ್ತಾನರ ಕೊಡುಗೆಗಳು, ತುಳು ಸಂಸ್ಕೃತಿ, ಪಂಚಾಯತ್ ರಾಜ್ ನಲ್ಲಿ ಮಹಿಳೆ ಎಂಬ ಮಹತ್ವದ ಅಧ್ಯಾಯಗಳನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ.

ಪಠ್ಯ ಕಡಿತದ ಪಟ್ಟಿಯನ್ನು ಗಮನಿಸಿದಾಗ ಬಿಜೆಪಿ ಸರ್ಕಾರ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ,
ಮುಂತಾದ ವಿಷಯಗಳನ್ನು ಒಳಗೊಂಡ ಪಠ್ಯವನ್ನು ಕಡಿತ ಮಾಡುವ ದುರಾಲೋಚನೆ ಇಟ್ಟುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪಠ್ಯ ಕಡಿತ ಮಾಡುವುದೇ ಆದರೆ ವೈಜ್ಞಾನಿಕ ವಿಧಾನಮೇರೆಗೆ ಆಗಬೇಕು ಹೊರತು ರಾಜಕೀಯ ಲಾಭಕ್ಕಾಗಿ ಅಲ್ಲ ಎಂಬುವುದು ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೆಶನ್ ನ ನಿಲುವು ಆಗಿದೆ.

Leave a Comment