ವಿದ್ಯಾರ್ಥಿ ವೇತನ, ಅರಿವು ಸಾಲದ ಹಣ ದುರುಪಯೋಗದ ಆರೋಪ – ಎಸ್.ಐ.ಓ ನಿಂದ ಸೂಕ್ತ ತನಿಖೆಗೆ ಆಗ್ರಹ

ಪತ್ರಿಕಾ ಪ್ರಕಟಣೆಗಾಗಿ

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನವನ್ನು ದುರುಪಯೋಗ ಮಾಡಿರುವ ಆರೋಪ ಕೇಳಿ ಬಂದಿದ್ದು ಸೂಕ್ತ ತನಿಖೆ ನಡೆಸಲು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸುಮಾರು 5.2 ಕೋಟಿ ಹಣವನ್ನು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ದುರುಪಯೋಗ ಮಾಡಿ ಬೇರಡೆ ವರ್ಗಾಯಿಸಿರುವ ಬಗ್ಗೆ ಗಂಭೀರ ಆರೋಪವಿದೆ. ಈಗಾಗಲೇ ವಿದ್ಯಾರ್ಥಿಗಳು 2019-20 ರ ಸಾಲಿನ ವಿದ್ಯಾರ್ಥಿ ವೇತನ ವಂಚಿತರಾಗಿದ್ದು ಈಗ ಕೇಳಿ ಬಂದಿರುವ ಆರೋಪವು ವಿದ್ಯಾರ್ಥಿಗಳೊಂದಿಗಿನ ದ್ರೋಹವಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾದದಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.

ಉನ್ನತ ವಿದ್ಯಾಭ್ಯಾಸಗಳಿಗೆ ಸಾಲ ಸೌಲಭ್ಯ ನೀಡುವ ‘ಅರಿವು-2’ ಯೋಜನೆಯ ಸುಮಾರು 50 ಕೋಟಿ ಹಣ ದುರುಪಯೋಗ ಮಾಡಿರುವ ಬಗ್ಗೆ ಆರೋಪವಿದ್ದು, ಈ ಬಗ್ಗೆ ಈಗಾಗಲೇ 2019 ರಲ್ಲಿ ಪ್ರಕರಣ ದಾಖಲಾಗಿದ್ದರೂ ಸೂಕ್ತ ತನಿಖೆಯಾಗಿಲ್ಲ. ಆದ್ದರಿಂದ ‘ಅರಿವು – 2’ ಸಾಲ ಯೋಜನೆಯ ಮೇಲಿನ ಆರೋಪದ ಮೇಲು ರಾಜ್ಯ ಸರಕಾರ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಇತೀ ತಮ್ಮ ವಿಶ್ವಾಸಿ

ಮುಹಮ್ಮದ್ ಪೀರ್ ಲಟಗೇರಿ

(ಕ್ಯಾಂಪಸ್ ಕಾರ್ಯದರ್ಶಿ, ಎಸ್.ಐ.ಓ ಕರ್ನಾಟಕ)

ಕೋವಿಡ್ 19 ಶವ ಸಂಸ್ಕಾರ ತರಬೇತಿ ಕಾರ್ಯಗಾರದಲ್ಲಿ ಭಾಗಿಯಾದ ಎಸ್.ಐ.ಓ ಕಾರ್ಯಕರ್ತರು

ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆ ಶವಾಗಾರದ ಬಳಿ ಸೋಮವಾರ ನೊಂದಾಯಿಸಿಕೊಂಡ ಸ್ವಯಂ ಸೇವಕರಿಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಉಡುಪಿ ಜಿಲ್ಲಾ ಎಸ್.ಐ.ಓ ಕಾರ್ಯಕರ್ತರು ಭಾಗವಹಿಸಿ ತರಬೇತಿ ಪಡೆದರು.

ತರಬೇತಿ ಕಾರ್ಯಗಾರದ ಚಿತ್ರ

ಈ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಜನರು ಜಾಗೃತರಾಗಿ ಇಂತ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಸ್ವಯಂ ಸೇವಕರ ಅಗತ್ಯ ಬಹಳಷ್ಟು ಇದೆ. ತಾವು ಸ್ವಯಂ ಪ್ರೇರಿತವಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಖುಷಿ ತಂದಿದೆ ಎಂದು ಹೇಳಿದರು.

ಫಾರೆನ್ಸಿಕ್ ತಜ್ಞ ಡಾ. ರಮೇಶ್ ಕುಂದರ್ ಸುರಕ್ಷತಾ ಕ್ರಮಗಳೊಂದಿಗೆ ಯಾವ ರೀತಿಯಲ್ಲಿ ಶವ ಸಂಸ್ಕಾರ ನಡೆಸಬಹುದೆಂಬುದರ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಾ. ರಮೇಶ್ ಕುಂದರ್, ಡಾ.ಪ್ರೇಮಾನಾಥ್,ಉಡುಪಿ ತಾಹಶೀಲ್ದಾರ್ ಪ್ರದೀಪ್ ಕುರುಡೇಕರ್, ಎಚ್.ಆರ್.ಎಸ್ ಸ್ವಯಂ ಸೇವಕ ಸಂಸ್ಥೆಯ ಹಸನ್ ಹೂಡೆ, ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ಎಸ್.ಐ.ಓ ಜಿಲ್ಲಾಧ್ಯಕ್ಷ ನಾಸೀರ್ ಗುಜ್ಜರ್ ಬೆಟ್ಟು, ಅಫ್ವಾನ್ ಹೂಡೆ ಉಪಸ್ಥಿತರಿದ್ದರು.

ರಾಜ್ಯ ಆಯ್ದ ಸದಸ್ಯರ ಶಿಬಿರ

ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ರಾಜ್ಯದ ಆಯ್ದ ಸದಸ್ಯರಿಗೆ ನಾಲ್ಕು ದಿನದ ಶಿಬಿರವನ್ನು ಬಿಫ್ಟ್ ನಲ್ಲಿ ಆಯೋಜಿಸಲಾಗಿತ್ತು. ಹಲವಾರು ಸಂಪನ್ಮೂಲ ವ್ಯಕ್ತಿಗಳಿಂದ ಸದಸ್ಯರ ತರಬೇತಿಯನ್ನು ನಡೆಸಲಾಯಿತು.

ಬೆಂಗಳೂರಿನಲ್ಲಿ ಎರಡು ದಿನಗಳ ಸದಸ್ಯತ್ವ ಶಿಬಿರ

ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ಸದಸ್ಯತ್ವ ಶಿಬಿರ ಆಯೋಜಿಸಲಾಗಿತ್ತು. ರಾಜ್ಯದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು.

ಎಸ್ ಐ ಓ ದಿಂದ ‘ಗ್ರೀನ್ ಫೂಟ್ ಪ್ರಿಂಟ್ಸ್’ ಪರಿಸರ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ

ಮಂಗಳೂರು: ಭವಿಷ್ಯದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವು ನಮಗೆ ಅನುಕೂಲವಾಗಿರಬೇಕಾದಲ್ಲಿ ಪ್ರಕೃತಿ ಸಂರಕ್ಷಣೆಯ ಜಾಗೃತಿಯು ಮಕ್ಕಳಿಗೆ ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್ ನ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಶಶಿಧರ್ ಶೆಟ್ಟಿ ಅಭಿಪ್ರಾಯಿಸಿದರು.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಮಂಗಳೂರು ಶಾಖೆಯ ವತಿಯಿಂದ ನಗರದ ಹಿದಾಯತ್ ಸೆಂಟರ್ ನ ಸಭಾಂಗಣದಲ್ಲಿ ‘ಗ್ರೀನ್ ಫೂಟ್ ಪ್ರಿಂಟ್ಸ್(ಸ್ಟಾರ್ಟ್ ಮೇಕ್ ಎ ಡಿಫರೆನ್ಸ್) ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಸಿದ ಪರಿಸರ ಸಂರಕ್ಷಣಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ವರ್ಷಕ್ಕೊಂದಾದರೂ ಗಿಡ ನೆಡುವ ಅಭ್ಯಾಸ ಇರಬೇಕು. ಆ ಮೂಲಕ ಪ್ರಕೃತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು.
ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಂಡು, ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು.
ಈ ಮೂಲಕ ನಾವು ಸುಸ್ಥಿರ ಭಾರತವನ್ನು ಕಟ್ಟುವವರಾಗಬೇಕು. ಪರಿಸರವನ್ನು ಹಾಳು ಮಾಡುವ ಬೃಹತ್ ಕಂಪನಿಗಳ ವಿರುದ್ಧ ಎದೆಗುಂದದೆ ನಿರಂತರ ಹೋರಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪರಿಸರ ರಕ್ಷಣಾ ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್, ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ, ಮಂಗಳೂರು ನಗರಾಧ್ಯಕ್ಷ ಇರ್ಷಾದ್ ವೇಣೂರು ಉಪಸ್ಥಿತರಿದ್ದು, ಮಾತನಾಡಿದರು.

ಪರಿಸರ ಅಭಿಯಾನದ ಸಂಚಾಲಕ ಅಮ್ಮಾರ್ ಅಹ್ಸನ್ ಸ್ವಾಗತಿಸಿದರು. ರುಮಾನ್ ಕುದ್ರೋಳಿ ಕಿರಾಅತ್ ಪಠಿಸಿದರು. ಎಸ್ ಐ ಓ ಕಾರ್ಯಕರ್ತ ರಾಹಿಲ್ ಕುದ್ರೋಳಿ ನಿರೂಪಿಸಿದರು.