ಕಥಾಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ

ಬೆಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಕರ್ನಾಟಕ ರಾಜ್ಯವು ಆಯೋಜಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 20ರಂದು ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಹಾಗೂ ಖ್ಯಾತ ಬರಹಗಾರ್ತಿಯೂ ಆಗಿರುವ ಪ್ರೊ. ಮಾಲತಿ ಪಟ್ಟಣಶೆಟ್ಟಿ ರವರು ‘ಸ್ಟೋರಿ ರೈಟಿಂಗ್: ರೆಲ್ಮ್ ಆಫ್ ಇಮಾಜಿನೇಶನ್’ ಎಂಬ ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್. ಐ. ಓ ಕರ್ನಾಟಕದ ರಾಜ್ಯಾಧ್ಯಕ್ಷರಾಗಿರುವ ಕಿಡಿಯೂರು ನಿಹಾಲ್ ಸಾಹೇಬ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಆನ್ಲೇನ್‍ನಲ್ಲಿ ನಡೆಯಲಿದ್ದು, ಝೂಮ್ ಆಪ್ಲಿಕೇಶನ್(ZOOM ID: 81086117690) ಮುಖಾಂತರ ಪಾಲ್ಗೊಲ್ಲಬಹುದು.

ಕಥಾಸ್ಪರ್ಧೆಯಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಪ್ರಹ್ಲಾದ್ ಡಿ. ಎಂ ರವರ ಹೈನೋರ ಹೊಲ ಕಥೆಗೆ ಪ್ರಥಮ ಬಹುಮಾನ, ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿ ಝಹರ್ ಫಾತಿಮಾರ ಚಾರ್‍ಡ್(ಇಂಗ್ಲೀಷ್) ಕಥೆಗೆ ದ್ವಿತೀಯ ಬಹುಮಾನ ಹಾಗೂ ಸರಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರಿನ ವಿದ್ಯಾರ್ಥಿನಿಯಾಗಿರುವ ಆನಮ್ ತಸ್ಮೀಯಾ ರವರ ತಾಹಿರಾಕೆ ಜಝ್‍ಬಾತ್(ಉರ್ದು) ಕಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ. ಪ್ರಥಮ ಬಹಮಾನವು 10000 ರೂಪಾಯಿ ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನವು 7000 ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ಹಾಗೂ ತೃತೀಯ ಬಹುಮಾನವು 5000 ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಉಡುಪಿ: ನೂತನ ಶಿಕ್ಷಣ ನೀತಿ – ಎಸ್.ಐ.ಓ ವಿದ್ಯಾರ್ಥಿ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ

ಉಡುಪಿ : ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಈ ಬಾರಿಯ ವಿಧಾನ ಸಭೆಯಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಎಸ್.ಐ.ಓ ಉಡುಪಿ ಜಿಲ್ಲಾ ವತಿಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ರೀತಿ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಜಾರಿ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳು ಗೊಂದಲಕಾರಿಯಾಗಿದ್ದು ಅವುಗಳನ್ನು ಮರೆಮಾಚುವ ಉದ್ದೇಶದಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅದನ್ನು ಜಾರಿಗೊಳಿಸಲು ಹೊರಟಿದೆ ಎಂಬುದು ಒಂದು ವಾದವಾದರೆ ಮತ್ತೊಂದೆಡೆ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಷಡ್ಯಂತ್ರ ಅಡಗಿದೆ ಎಂಬುದು ಅಧ್ಯಯನಶೀಲರ ವಾದವಾಗಿದೆ ಎಂದು ಡಾ.ಫಹೀಮ್ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದ್ದ ಬದಲಾವಣೆಗಳ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಚರ್ಚೆ ನಡೆಸಿದ ನಂತರ ಗೋಚರವಾಗುವ ತಪ್ಪು ಅಥವಾ ಗೊಂದಲಕಾರಿ ವಿಷಯಗಳನ್ನು ತಿದ್ದುಪಡಿಗೆ ತಂದು, ಒಳ್ಳೆಯ ಅಂಶಗಳನ್ನು ಪುಷ್ಟೀಕರಿಸಿ ಅದನ್ನು ಸದನದಲ್ಲಿ ಮಂಡಿಸಿ ರಾಜ್ಯಕ್ಕೆ ಅನುಗುಣವಾಗುವ ಸಮಗ್ರ ನೂತನ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಜಾರಿಗೊಳಿಸುವುದು ಉತ್ತಮ ಕ್ರಮವಾಗಿದೆ ಎಂಬುದನ್ನು ಎಸ್.ಐ.ಓ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಬಯಸುತ್ತದೆ.

ಈ ರಾಷ್ಟ್ರೀಯ ಶಿಕ್ಷಣ ನೀತಿಯು 3 ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುತ್ತದೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯದಿಂದ ತಿಳಿದಿಕೊಂಡಿದ್ದೇವೆ ಆದರೆ, ಈ ನೀತಿಯ ಕೈಪಿಡಿಯನ್ನು ರಾಜ್ಯದ ಜನತೆಗೆ ಲಭ್ಯವಾಗಿಸಿ ಚರ್ಚೆ-ಸಂವಾದಕ್ಕೆ ಮುಕ್ತ ಅವಕಾಶ ನೀಡಿ ಅದರ ವಿಮರ್ಶೆ ಮತ್ತು ವಿಶ್ಲೇಷಣೆಗೆ ಅವಕಾಶ ಕಲ್ಪಿಸದೇ ನಮ್ಮ ರಾಜ್ಯ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದು ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಮೊದಲಿಗೆ ಜಾರಿ ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.

ಶಿಕ್ಷಣ ಹಕ್ಕು ಕಾಯಿದೆ ಕಲಂ 6, 9, 21 ಹಾಗು 22 ರ ಅನ್ವಯ ಶಾಲಾ ಮತ್ತು ಪಂಚಾಯತಿ ಹಂತದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮತ್ತು ಗ್ರಾಮ ಪಂಚಾಯತಿಗಳ ಮೇಲಿರುವುದರಿಂದ ನೀತಿಯನ್ನು ಸಾರ್ವಜನಿಕರ ಓದಿಗೆ ಮತ್ತು ಚರ್ಚೆಗೆ ಅವಕಾಶ ನೀಡಿ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಮೂಲ ವಾರಸುದಾರರಾದ ನಾವು ನಮ್ಮ ಮಕ್ಕಳ ಶಿಕ್ಷಣವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ತಿಳಿಯದೆ ಅದನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಸರಿಯಾದ ಪ್ರಕ್ರಿಯೆಯಲ್ಲ.
ಆದ್ದರಿಂದ, ಅದನ್ನು ತರಾತುರಿಯಾಗಿ ಜಾರಿಗೊಳಿಸಬಾರದೆಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ.

ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ಜನ ಸ್ನೇಹಿ ಕೈಪಿಡಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿ ಶಾಲೆ, ಪಂಚಾಯತಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಈ ಚರ್ಚೆಗಳ ಆಧಾರದ ಮೇಲೆ ನಮ್ಮ ರಾಜ್ಯಕ್ಕೆ ಅನುವಾಗುವ “ಕರ್ನಾಟಕ ಶಿಕ್ಷಣ ನೀತಿ”(ಕಶಿನೀ) ರೂಪಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ.

ಕರ್ನಾಟಕ ಶಿಕ್ಷಣ ನೀತಿಯನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡರಲ್ಲೂ ಮಂಡಿಸಿ, ಚರ್ಚಿಸಿ ಅಂಗೀಕರಿಸಿದ ನಂತರವೇ ಜಾರಿಗೊಳಿಸಬೇಕೇಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ ಎಂದು ಫಹೀಮ್ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ನಾಸೀರ್, ಅಯನ್ ಮಲ್ಪೆ, ವಸೀಮ್ ಹೂಡೆ, ಶಾರೂಕ್ ಮುಂತಾದವರು ಉಪಸ್ಥಿತರಿದ್ದರು.

ಎಸ್.ಐ.ಓ ಕರ್ನಾಟಕ ನಿಯೋಗದಿಂದ ಸಿದ್ಧರಾಮಯ್ಯ ಭೇಟಿ – ಅಧಿವೇಶನದಲ್ಲಿ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಚರ್ಚಿಸಲು ಆಗ್ರಹ

ಬೆಂಗಳೂರು: ಕೇಂದ್ರ ಸರಕಾರ ಅನುಷ್ಠಾನಕ್ಕೆ ತರಲು ಯತ್ನಿಸುತ್ತಿರುವ ನೂತನ ಶಿಕ್ಷಣ ನೀತಿಯ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಸರಕಾರದ ಮೇಲೆ ಒತ್ತಾಯ ತರಬೇಕೆಂದು ಆಗ್ರಹಿಸಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಎಸ್.ಐ.ಓ ಕರ್ನಾಟಕ ನಿಯೋಗ ಭೇಟಿಯಾಗಿ ಆಗ್ರಹಿಸಿತು.

ಸೆಪ್ಟೆಂಬರ್ 16 ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ಈ ಬಗ್ಗೆ ಚರ್ಚಿಸಬೇಕು ಮತ್ತು ಮುಖ್ಯಮಂತ್ರಿಗಳಿಗೆ ಚರ್ಚೆಗೆ ಸಮಯ ಮೀಸಲು ಇಡಲು ಪತ್ರ ಬರೆಯುವಂತೆ ಸಿಧ್ಧರಾಮಯ್ಯ ಅವರಲ್ಲಿ ಈ ಸಂದರ್ಭದಲ್ಲಿ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಐ.ಓ ಕರ್ನಾಟಕ ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದ ನಿಹಾಲ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಡಾ. ನಸೀಮ್ ಅಹ್ಮದ್, ಸಂಪರ್ಕ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ರಾಜ್ಯ ಕಾರ್ಯದರ್ಶಿಗಳಾದ ಅಸೀಮ್ ಜವಾದ್, ಸಯ್ಯದ್ ಶಫಿ, ಸದಸ್ಯರಾದ ಅಫ್ವಾನ್ ಹೂಡೆ ಉಪಸ್ಥಿತರಿದ್ದರು.

ಎಸ್.ಐ.ಓ ಭಟ್ಕಳದ ವತಿಯಿಂದ ಆರ್.ಟಿ.ಇ ಸಂಬಂಧಿತ ಮಾಹಿತಿಗಾಗಿ ಬಿ.ಇ.ಓ ಭೇಟಿ

ಭಟ್ಕಳ: ಎಸ್‌.ಐ.ಓ ಕಾರ್ಯಕರ್ತರು ಮತ್ತು ಎಚ್.ಆರ್.ಎಸ್ ಕಾರ್ಯಕರ್ತರು ಭಟ್ಕಳದ ಬಿ.ಇ.ಓ ಗೆ ಭೇಟಿಯಾದರು.

ಭೇಟಿಯ ಸಂದರ್ಭದಲ್ಲಿ ಶಿಕ್ಷಣ ಹಕ್ಕು ಕಾಯಿದೆಗೆ ಸಂಬಂಧಿಸಿದಂತೆ ಅವರಲ್ಲಿ ಮಾಹಿತಿ ಪಡೆದು, ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು.

ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ನೂತನ ಶಿಕ್ಷಣ ನೀತಿ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ

ರಾಯಚೂರು: ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ಜನಪ್ರತಿನಿಧಿಗಳು ಕೇಂದ್ರ ಸರಕಾರ ಅನುಷ್ಠಾನಕ್ಕೆ ತರಲಿರುವ ನೂತನ ಶಿಕ್ಷಣ ನೀತಿಯನ್ನು ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ನೂತನ ಶಿಕ್ಷಣ ನೀತಿಯಲ್ಲಿ ಇರುವ ಅಂಶಗಳು ವಿಧಾನ ಸಭೆಯಲ್ಲಿ ಚರ್ಚೆಯಾಗಬೇಕು. ಅದರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ನಾಗರಿಕರ ಮುಂದೆ ಸ್ಪಷ್ಟವಾಗಬೇಕೆಂದು ಆಗ್ರಹಿಸಿದ್ದಾರೆ.

ಲಿಂಗಸೂರು, ಸಿಂಧನೂರು ಮತ್ತು ರಾಯಚೂರು ಘಟಕದ ಕಾರ್ಯಕರ್ತರು ಮನವಿ ಸಲ್ಲಿಸಿ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದೆ.